ದೇವರು ಇರಬಹುದೇ ..? ಅಥವಾ ಬರೀ ಕಲ್ಪನೆಯೇ ..? ದೆವ್ವ ಭೂತ ಗಳು ನಿಜವೇ ..? ನಂಬಿಕೆ ಎಂದರೇನು ..? ಮೂಢನಂಬಿಕೆಗಳೆಂದರೇನು..?? ಹೀಗೆ ಹಲವಾರು ಚರ್ಚೆಗಳು , ವಾದ ಪ್ರತಿವಾದಗಳು ಅಂತ್ಯ ಕಾಣದಂತೆ ದಿನೇ ದಿನೆ ಬೆಳೆಯುತ್ತಾ , ಯಾವುದೇ ನಿರ್ಧಿಷ್ಟ ಗುರಿಯನ್ನು ಹೊಂದಿರದೇ ಹೊಸ ಹೊಸ ದಿಕ್ಕಿನೆಡೆಗೆ ಸಾಗುತ್ತಿದೆ . ಮೊದ ಮೊದಲು ಇಂತಹ ವಿಷಯಗಳು ಅತ್ಯಂತ ರೋಚಕವಾಗಿ ಕಾಣಿಸುತ್ತಿತ್ತಾದರೂ ಈಗ ಇಂತಹ ವಿಷಯಗಳಲ್ಲಿನ ಚರ್ಚೆಗಳು , ವಾದ ಪ್ರತಿವಾದ ಗಳು ಕೇವಲ ಕಾಲಹರಣ ಎನಿಸುವಂತಾಗಿದೆ. ಹಾಸ್ಯದ ಸಂಗತಿಗಳೂ ಎನಿಸುವಷ್ಟರ ಮಟ್ಟಿಗೆ ಬಂದು ನಿಂತಿದೆ. ಆಕಾಶದಲ್ಲಿ ಒಂದು ಲಕ್ಷ ನಕ್ಷತ್ರಗಳಿವೆ ಎಂದರೆ ಇರಬಹುದೇನೋ ಎಂದು ಸುಮ್ಮನಾಗುವ ಜನರು , ತಮ್ಮ ಎದುರಿನಲ್ಲೇ ಇರುವ ಗೋಡೆಯ ಬಣ್ಣ ಒಣಗಿದೆ ಎಂದರೆ ಹೋಗಿ ಸ್ಪರ್ಶಿಸಿ ಸ್ಪಷ್ಟ ಪಡಿಸಿಕೊಳ್ಳುತ್ತಾರೆ. ಅಂದರೆ ತಮ್ಮಿಂದ ಸುಲಭವಾಗಿ ಆಗುವಂತಹ ಕೆಲಸಗಳಲ್ಲಿ ತೋರುವ ಆಸಕ್ತಿ , ಸ್ವಲ್ಪ ಕಷ್ಟವೆನಿಸುವ ತರ್ಕಗಳಲ್ಲಿ , ಚರ್ಚೆಗಳಲ್ಲಿ , ಕೆಲವು ಸಂಗತಿಗಳ ಅಂತರಾಳ ತಿಳಿಯುವಲ್ಲಿ ತೋರುವುದಿಲ್ಲ . ಯಾವುದೋ ಒಂದು ಭಯ , ಕೆಲಸಕ್ಕೆ ಭಾರದ ಆಚರಣೆ ಗಳು , ಅರ್ಥವಿಲ್ಲದ ಪದ್ಧತಿ ಗಳು, ಯಾರಿಂದಲೋ ಕೇಳಿದ ಕಥೆಗಳು ಇವೇ ಮೊದಲಾದ ಮೂಢ(ನಂಬಿಕೆ)ಗಳು ಹತ್ತು ಹಲವು ಯೋಚನೆಗಳ ಹಾದಿಯನ್ನೇ ನಾಶಪಡಿಸುತ್ತಿವೆ.
ಶಿಕ್ಷಣ ವಂತರೂ , ಬುದ್ದಿ ಜೀವಿಗಳೆನಿಸಿಕೊಂಡವರೂ ಸಹ ಮೂಢನಂಬಿಕೆಗಳಿಗೆ ಬಲಿಯಾಗುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ದೇವರು ,ದೆವ್ವ ಭೂತ ಗಳನ್ನು ಯಾರೊಬ್ಬರೂ ಸಹ ತಮ್ಮ ಕಣ್ಣುಗಳಿಂದ ನೋಡಿಲ್ಲ , ಅನುಭವಿಸಿಲ್ಲ ಬದಲಾಗಿ ಕೇವಲ ಕಥೆಗಳು , ಚಿತ್ರಗಳು , ಕಾದಂಬರಿಗಳ ಮೂಲಕ ವಷ್ಟೇ ಅವುಗಳ ಬಗ್ಗೆ ತಿಳಿದಿದ್ದಾರೆ. ಇವು ಕೇವಲ ಮಾನವ ಸೃಷ್ಟಿ. ದೇವರು ದೆವ್ವ ಭೂತ ಗಳು ಅಸ್ಥಿತ್ವದಲ್ಲಿ ಇವೆಯೇ ಇಲ್ಲವೇ ಎನ್ನುವುದು ಇಲ್ಲಿ ವಿಷಯವಲ್ಲ. ಅದರ ಬಗೆಗಿನ ಚರ್ಚೆಗೆ ಅರ್ಥವೇ ಇಲ್ಲ. ಇಂತಹ ಚರ್ಚೆ ಕೇವಲ ಹಾಸ್ಯಕ್ಕೆ ದಾರಿಮಾಡಿಕೊಡುತ್ತವೆ. ಈಗಂತೂ ಎಲ್ಲಿ ನೋಡಿದರೂ ಮಠ ಮಂದಿರ , ಚರ್ಚು , ದೇವಸ್ಥಾನಗಳು ಬೀದಿ ಬೀದಿ ಗಳಲ್ಲಿ ತಲೆ ಎತ್ತುತ್ತಿವೆ.ವ್ಯಕ್ತಿ ಪೂಜೆ ಅನಿಷ್ಟಪದ್ಧತಿ ಹಾಗೆ ಹೀಗೆ ಎಂದು ಏನೇನೋ ಹೇಳುತ್ತಿದ್ದರೂ ದಿನೇ ದಿನೇ ಸನ್ಯಾಸಿ ಗಳು , ಮಠಾದಿಪತಿಗಳೂ, ದೇವಮಾನವರ ಸಂಖ್ಯೆ ಏನೂ ಕಡಿಮೆ ಆದಂತೆ ಕಾಣುತ್ತಿಲ್ಲ. ಕೇವಲ ಮಾನವನಾಗಿದ್ದುಕೊಂಡೂ ಸಹ ಒಳ್ಳೆಯ ಕೆಲಸಗಳನ್ನು ಮಾಡಬಹುದಲ್ಲವೇ...? ಅನಾಥಾಶ್ರಮಗಳು , ವೃದ್ಧಾಶ್ರಮಗಳು , ವಿಕಲಚೇತನರ ಪರಿಪಾಲನ ಕೇಂದ್ರಗಳು , ಅನ್ನದಾಸೋಹ ಕೇಂದ್ರಗಳು ಎಲ್ಲ ಮಂದಿರಗಳಿಗಿಂತ ಕಡಿಮೆಯೇ..? ಬೇಡದ ಆಚರಣೆಗಳು , ದೇವರು ಧರ್ಮದ ಹೆಸರಿನಲ್ಲಿ ಹಣಪೋಲು ಮಾಡುವುದಕ್ಕಿಂತ , ಹಸಿದವರಿಗೆ ಆಹಾರವಾಗಿ , ನಿರಾಶ್ರಿತರಿಗೆ ನೆಲೆಯಾಗಿ , ಕಷ್ಟದಲ್ಲಿರುವವರಿಗೆ ಸಹಾಯಕ್ಕಾಗಿ ಅದೇ ಹಣವನ್ನು ಉಪಯೋಗಿಸುವುದು ಒಳಿತಲ್ಲವೇ ..??
ಪ್ರಾಣಿಬಲಿ ಕೊಡುವುದು , ನರಬಲಿ ಕೊಡುವುದು , ಮಾಟ ಮಂತ್ರ ಗಳಷ್ಟನ್ನೇ ಮೂಢನಂಬಿಕೆಗಳು ಎನ್ನುವುದಾದರೆ ಯಾವುದೋ ಅರಮನೆಯಂತಿರುವ ಕಟ್ಟಡದ ಒಳಗಿನ ಕೇವಲ ಕಲ್ಲಿನ ವಿಗ್ರಹ ವನ್ನು ನೋಡುವ ಆತುರದಲ್ಲಿ ಜನಸಂದಣಿ ಉಂಟಾಗಿ ಕಾಲ್ತುಳಿತಕ್ಕೆ ಬಿದ್ದು ಸಾಯುವುದು ಮೂಢನಂಬಿಕೆ ಯಲ್ಲವೇ..?ಚಳಿಯಂತಹ ಚಳಿಯಲ್ಲೂ ಸಹ ಮುಂಜಾನೆ ತಣ್ಣಗಿನ ನೀರಿನಲ್ಲಿ ಮುಳುಗಿ ಏಳುವುದು, ಯಾವುದೋ ಕಟ್ಟಡದ ಸುತ್ತಲೂ ಹೊರಳಾಡುವದು, ಆರೋಗ್ಯಹಾಳುಮಾಡಿಕೊಳ್ಳುವುದು ಅದೆಂತಹ ನಂಬಿಕೆ..? ದಿನ ನಿತ್ಯದ ಜೀವನಕ್ಕೆ ಕಷ್ಟವಿದ್ದರೂ ಸಹ ಮಠ ಮಂದಿರ ಮಸೀದಿ ಚರ್ಚ ಗಳ ಹುಂಡಿಯಲ್ಲಿ ತನ್ನ ಕೈ ಮೀರಿ ರಾಶಿ ರಾಶಿ ಹಣ ಸುರಿಯುವುದು ಮೂಢನಂಬಿಕೆ ಯಲ್ಲದೆ ಮತ್ತೇನು...? ಮಾನವರ ದೇಹದಲ್ಲಿ ದೇವರು ದೆವ್ವ ಭೂತಗಳು ಬಂದು ಸೇರುವುದು, ದೇವರನ್ನು ಬಂದಿರುವವರನ್ನು ಪೂಜಿಸುವುದು, ಅವರು ಹೇಳಿದಂತೆ ಆಚರಣೆಗಳು, ಅವರು ಹೇಳಿದ ವಿಷಯಗಳನ್ನೇ ಅಂತಿಮ ಎಂದು ಭಾವಿಸುವುದು, ಅವರು ನೀಡುವ ಪೊಳ್ಳು ಭರವಸೆಗಳು, ಪರಿಹಾರಗಳನ್ನು ಆಲಿಸಿ ಭಯ ಭಕ್ತಿ ತೋರುವುದು , ಹಾಗೆಯೇ ದೆವ್ವ ಭೂತಗಳು ಸೇರಿಕೊಂಡಿರುವ ದೇಹವನ್ನು ಹಿಂಸಿಸುವುದು , ಹೊಡೆದು ಬಡಿದು ಅವನ್ನು ದೇಹದಿಂದ ಉಚ್ಚಾಟನೆ ಮಾಡುವಂತೆ ನಟಿಸುವುದು ಇಂತಹ ಸಂಗತಿಗಳು ಎಷ್ಟೊಂದು ಹಾಸ್ಯಸ್ಪದ ವಲ್ಲವೇ...?? ಇವುಗಳನ್ನೂ ನಂಬಿಕೆಗಳೆನ್ನಬಹುದೇ..? ಪರೀಕ್ಷೆಯ ಹಿಂದಿನ ದಿನ ವಿದ್ಯಾರ್ಥಿಗಳು ದೇವಸ್ಥಾನ ಮಂದಿರ ಗಳಿಗೆ ಬೇಟಿ ನೀಡುವುದು , ಪೂಜೆ ಪುನಸ್ಕಾರಗಳನ್ನು ನಡೆಸುವುದು. ಪರೀಕ್ಷೆ ಮುಗಿದನಂತರದಲ್ಲಿ ಮಂದಿರಗಳಿಗೆ ಬೇಟಿ ನೀಡಿ ಪೂಜೆ ಮಾಡಿಸುವುದು , ಪ್ರಾಣಿಬಲಿ ನೀಡುವುದು, ಹೀಗೆ ಹತ್ತು ಹಲವು ರೀತಿಯಲ್ಲಿ ತನ್ನ ಹರಕೆಗಳನ್ನು ತೀರಿಸುವುದು ನಂಬಿಕೆಗಳೇ ..?ಭೋಜನಕ್ಕಾಗಿ ರಾತ್ರಿ ಹನ್ನೆರಡರ ವರೆಗೂ ಕಾದಿದ್ದು ತನ್ನ ವೃತ ಮುಗಿಸಿ ಭೋಜನ ( ಸಸ್ಯ / ಮಾಂಸ ) ಮುಗಿಸಿ ಮಲಗುವುದು, ಆಚರಣೆ ಭಯ ಭಕ್ತಿ ಹೆಸರಿನಲ್ಲಿ ಉಪವಾಸ ನಡೆಸುವುದು ನಂಬಿಕೆಗಳೇ..? ಪೂಜೆ ಹಬ್ಬ ಹರಿದಿನಗಳ ಆಚರಣೆಯ ಹೆಸರಿನಲ್ಲಿ ಮರ ಗಿಡ ಗಳನ್ನು ಕಡಿಯುವುದು , ಅವುಗಳನ್ನು ಅಲಂಕಾರಕ್ಕಾಗಿ ಬಳಸುವುದು , ಹಣವನ್ನು ಸಂಗ್ರಹಿಸಿ ದುಂದುವೆಚ್ಚ ಮಾಡುವುದು, ವಾಯುಮಾಲಿನ್ಯ, ಶಬ್ದಮಾಲಿನ್ಯ ಮಾಡುವುದು , ನೀರನ್ನು ಕಲುಷಿತ ಗೊಳಿಸುವುದು , ಬೀದಿ ಬೀದಿಗಳಲ್ಲಿ ದೇವರ ಹೆಸರಿನ ವಿಗ್ರಹಗಳನ್ನು ಇರಿಸಿ ಅದರ ನಾಮಕಾವಸ್ತೆಯಲ್ಲಿ ಕುಣಿದು ಕುಪ್ಪಳಿಸಿ ಹಣದ ದುರುಪಯೋಗ ನಡೆಸುವುದು ದೇವರ ಹೆಸರಿನಲ್ಲಿ ಪ್ರಕೃತಿಗೆ ಮಾಡುವ ದ್ರೋಹ ಎನಿಸುವುದಿಲ್ಲವೇ..? ಇವು ನಂಬಿಕೆಗಳೇ ಅಥವಾ ಮೂಢನಂಬಿಕೆಗಳೇ ಅಥವಾ ಒಂದೇ ನಾಣ್ಯದ ಎರಡು ಮುಖಗಳಂತೆ ಒಂದೇ ಅರ್ಥದ ಎರಡು ಪದಗಳೇ...??
ಇತ್ತೀಚಿನ ದಿನಗಳಲ್ಲಿ ನಮ್ಮ ಸುದ್ದಿ ಮಾದ್ಯಮ ಗಳೂ ಸಹ ಮೂಢನಂಬಿಕೆಗಳಿಗೆ ಮನೆ ಮಾಡಿ ಕೊಡುತ್ತಿವೆ. ಮುಂಜಾನೆಯಿಂದ ರಾತ್ರಿಯವರೆಗೆ ಮೂಢನಂಬಿಕೆಯನ್ನು ಪ್ರಚೋದಿಸುವ ಅದೆಷ್ಟು ಕಾರ್ಯಕ್ರಮಗಳೋ.. ಒಬ್ಬ ಕಪಟ ಸನ್ಯಾಸಿಯ ಬಗೆಗೆ ಅವನ ಪ್ರತಿಯೊಂದೂ ತಪ್ಪುಗಳನ್ನು ಅವ್ಯವಹಾರಗಳನ್ನು ಸ್ವಲ್ಪವೂ ಬಿಡದೆ ಪ್ರಸಾರಮಾಡುತ್ತಿರುವಾಗಲೇ , ಆತನ ಆಶ್ರಮದ ಬಗ್ಗೆ , ಅಲ್ಲಿ ನಡೆಯುವ ಆಚರಣೆಗಳು , ಪೂಜಾ ಕಾರ್ಯಕ್ರಮಗಳ ಬಗ್ಗೆ ಜನರನ್ನು ಸೆಳೆಯುವಂತ ಜಾಹಿರಾತುಗಳನ್ನೂ ಪ್ರಸಾರಮಾಡುತ್ತಿರುತ್ತವೆ. ಮೂಢನಂಬಿಕೆಯಿಂದ ಜನರನ್ನು ದೂರವಿಡುವಂತಹ ಒಂದೆರಡು ಕಾರ್ಯಕ್ರಮಗಳನ್ನು ಪ್ರಸಾರಮಾಡಿದರೆ, ಜನರನ್ನು ಮೂಢನಂಬಿಕೆ ಯತ್ತ ಸೆಳೆಯಲು ಹತ್ತು ಹಲವು ಕಾರ್ಯಕ್ರಮಗಳು ಪ್ರಸಾರವಾಗುತ್ತಿರುತ್ತವೆ. ಯಾವುದೋ ಒಬ್ಬ ವ್ಯಕ್ಥಿಯನ್ನು ನಾಮಕಾವಸ್ತೆಗೆ ಕೂರಿಸಿಕೊಂಡು ಆತನ ಜೊತೆಯಲ್ಲಿ ಮೂರೂ ನಾಲ್ಕು ಸ್ವಾಮೀಜಿಗಳು, ಸನ್ಯಾಸಿಗಳು, ದೇವಮಾನವರು, ಜ್ಯೋತಿಷಿಗಳೆನಿಸಿಕೊ೦ಡವರನ್ನು ಕೂರಿಸಿಕೊಂಡು ಚರ್ಚೆಗಳನ್ನು ನಡೆಸಿ ಕೊನೆಗೆ ವಿಜ್ಞಾನವೇ ಸುಳ್ಳು (ಮೂಢ)ನಂಬಿಕೆ ಗಳೇ ಸತ್ಯ ಎನ್ನುವಷ್ಟರ ಮಟ್ಟಿಗೆ ನಮ್ಮ ಮಾಧ್ಯಮಗಳು ಮುಂದುವರಿದಿವೆ. ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿರುವಂತಹ ಮಾಧ್ಯಮಗಳು ಮೂಢನಂಬಿಕೆಯ ಬೀಜ ಬಿತ್ತುತ್ತಿರುವುದು ವಿಷಾದನೀಯ. ಇಂತಹ ವಿಷಯಗಳಲ್ಲಿ ಮಾಧ್ಯಮಗಳು ಆದಷ್ಟು ಬೇಗ ಎಚ್ಚೆತ್ತು ಕೊಳ್ಳುವುದು ಅನಿವಾರ್ಯ.
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮುಳ್ಳಿನ ಗುಡಿಯೊಳಗೆ , ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೇ ಎನ್ನುವ ಹಾಡು ಇಲ್ಲಿ ನೆನಪಾಗುತ್ತಿದೆ. ದೇವರು ಇರಲಿ ಇಲ್ಲದಿರಲಿ ಒಟ್ಟಿನಲ್ಲಿ ಮೂಢನಂಬಿಕೆಗಳು ನಾಶವಾಗಬೇಕಿದೆ . ನಂಬಿಕೆ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳು, ಶೋಷಣೆ, ಹಣದ ದುರುಪಯೋಗ , ದುಂದುವೆಚ್ಚಗಳು ನಿಲ್ಲ ಬೇಕಿದೆ. ಇದರಿಂದ ನಮ್ಮ ಸುತ್ತಲೂ ಉಂಟಾಗುತ್ತಿರುವ ಕೆಟ್ಟ ಪರಿಣಾಮಗಳು ಕೊನೆಯಾಗಬೇಕಿದೆ. ನಮ್ಮ ನಂಬಿಕೆ ಮೂಢನಂಬಿಕೆ ಗಳಿಂದ ಒಳ್ಳೆಯ ಕೆಲಸಗಳು ನಡೆಯದಿದ್ದರೂ , ಯಾವುದೇ ಕೇಡುಕಾಗದಿದ್ದರೆ ಒಳಿತು. ವಿಧ್ಯಾರ್ಥಿಗಳು , ಬುದ್ದಿವಂತ ಜೀವಿ ಗಳೆನಿಸಿಕೊಂಡವರು ಇಂತಹ ವಿಷಯ ಗಳ ಬಗೆಗೆ ಜಾಗೃತಿ ಮೂಡಿಸುವ ಹಾಗು ತಾವೂ ಎಚ್ಚೆತ್ತು ಕೊಳ್ಳುವ ಕೆಲಸಗಳು ಆಗಬೇಕಿದೆ.