Tuesday, 24 April 2012

ಆತ್ಮೀಯ ಗೆಳೆತನದ ನಿರೀಕ್ಷೆಯಲ್ಲಿ ..............


ತುಂಬಾ ಬೋರ್  ಅದಾಗ ಏನಾದರು ಬರೀಬೇಕು ಅನ್ಸುತ್ತೆ , ಏನೇನೋ  ವಿಷಯಗಳು ನೆನಪಿಗೆ ಬರುತ್ತೆ . ಹೀಗೆ  ಮನದಲ್ಲಿ ಮೂಡಿದ  ಭಾವನೆಗಳ ಬೆನ್ನು ಹಿಡಿದು ಹೊರಟರೆ ಒಂದರ ಹಿಂದೆ ಒಂದರಂತೆ ಅದರ ಕೊಂಡಿ ಬೆಳೆದು ದೊಡ್ಡ ಸರಪಳಿಯೇ ಆಗುತ್ತದೆ . ಆದರೆ  ಈ  ಆಲಸ್ಯ ಇದಿಯಲ್ಲ !!! ಇದು  ಈ ಸರಪಳಿಯನ್ನು ಬೆಳೆಯೋದಕ್ಕೇ ಬಿಡ್ತಾ ಇಲ್ಲ ... ತುಂಬಾ ಸಲ ಸುಮ್ನೆ ಕೂತ್ಕೊಂಡಾಗೆಲ್ಲ  ಮನಸಲ್ಲಿ ತುಂಬಾ ಚಿಂತನೆಗಳು ಮೂಡುತ್ತೆ  ಆದರೆ  ಅದನ್ನು ಒಂದು ಕಡೆ ದಾಖಲಿಸೋಣ ಅಂದ್ರೆ ಈ ದರಿದ್ರ ಸೋಮಾರಿತನ ಇದಿಯಲ್ಲ  ಇದು ನನ್ನ ಲೇಖನಿಗೆ ಅವಕಾಶನೇ ಕೊಡ್ತಾ ಇಲ್ಲ . ಆದ್ರೂ ಇವತ್ತು ತುಂಬಾ ಕಷ್ಟ ಪಟ್ಟು ನನ್ನ ಲೇಖನಿನ  ಹೊರಗೆ ತೆಗೆದು ಪೇಪರ್  ಮೇಲೆ ಇಟ್ಟಿದೀನಿ .ನೋಡೋಣ ಎಲ್ಲಿವರೆಗೆ ಇದು ಆಲಸ್ಯದ ಜೊತೆಗೆ ಹೋರಾಡುತ್ತೆ  ಅಂತ ..!!!!!
   ನನಗೆ  ಈ ಪ್ರೀತಿ , ಸ್ನೇಹ  ಇಂತಹ  ವಿಷಯಗಳಲ್ಲಿ  ತುಂಬಾ ಆಸಕ್ತಿ . ಈ ವಿಷಯಗಳ  ಕುರಿತು ಸ್ನೇಹಿತರೊಂದಿಗೆ   ಮಾತಾಡ್ತಾ ಇರ್ತೀನಿ , ಇದಕ್ಕೆ ಸಂಭಂದಿಸಿದಂತೆ ಲೇಖನಗಳು , ಕಾದಂಬರಿಗಳು  ಹಾಗೂ ಚಲನಚಿತ್ರಗಳನ್ನು ಆಗಾಗ  ನೋಡ್ತಾ ಇರ್ತೀನಿ . ತುಂಬಾನೆ  ಖುಷಿ ಕೊಡುತ್ತೆ . ಆದರೂ ನನಗೆ  ಆಧುನಿಕ  ಪ್ರೇಮದಂತೆ , ಆಧುನಿಕ  ಸ್ನೇಹದ ಮೇಲೆ ಕೂಡ ಅಸಹ್ಯ ಅನ್ನೋ ಭಾವನೆ ಮೂಡ್ತಾ ಇದೆ . ಯಾವಾಗ ಬೇಕಾದರೂ ಹುಟ್ಟಿಕೊಳ್ಳುತ್ತೆ  ಹಾಗೆ ಯಾವಾಗ  ಬೇಕಾದರೂ  ಸಾಯುತ್ತಿದೆ ....
ಕೆಲವೊಂದು ಕಡೆಗಳಲ್ಲಿ ಪ್ರೀತಿ ಹೇಗೆ ತನ್ನ ಘನತೆ - ಗೌರವವನ್ನು ಕಳೆದು ಕೊಳ್ತಾ ಇದಿಯೋ  ಹಾಗೆ ಸ್ನೇಹವೆಂಬ ಪವಿತ್ರ (???) ಸಂಬಂಧವೂ ಸಹ ಹಲವು ಕಡೆಗಳಲ್ಲಿ ತನ್ನ ಪ್ರಭುದ್ದತೆ ಯನ್ನು ವಿನಾಶದ ಅಂಚಿಗೆ ತಳ್ಳುತ್ತಿದೆ . ನಾನು  ಹೀಗೆ  ಸ್ನೇಹದ  ಕುರಿತಾಗಿ ಮಾತನಾಡುತ್ತಿರುವುದಕ್ಕೆ ಹಲವು ಕಾರಣಗಳಿವೆ . ಹತ್ತಿರದಿಂದ  ನಾನು ಕಂಡ ಅನೇಕ  ಸಂಗತಿಗಳು ,ನನ್ನ ಅನುಭವಕ್ಕೆ ಬಂದ  ಕೆಲವೊಂದು ವಿಷಯಗಳು  ಹೀಗೆ  ಅನೇಕ . ನನ್ನ ಮನಸ್ಸೆಂಬ ಪುಟ್ಟ ಮನೆಯ ಬಾಗಿಲನ್ನು ತಟ್ಟಿ ತಟ್ಟಿ ಎಬ್ಭಿಸಿದ  ಹಲವು ಸಂಗತಿಗಳು ,ನೈಜ ಘಟನೆಗಳೇ ಇದಕ್ಕೆ ಮೂಲ ಕಾರಣ.....
  ನಾವು ದೊಡ್ದವರಾಗ್ತಾ ಹೋದಹಾಗೆ ನಮ್ಮ ಭಾವನೆಗಳು ,ಜೀವನಶೈಲಿ ,ಚಿಂತನೆ  ಹೀಗೆ  ಎಲ್ಲವೂ ಬದಲಾಗುತ್ತಾ ಸಾಗುತ್ತದೆ . ನಮ್ಮ ಮನದಲ್ಲಿನ  ಅನೇಕ ಭಾವನೆಗಳನ್ನು ಹಂಚಿಕೊಳ್ಳಲು ಅನುಕೂಲವಾಗುವಂತಹ  ಒಂದು ಆತ್ಮೀಯವಾದ  ಹೃದಯಕ್ಕಾಗಿ ನಮ್ಮ ಮನಸ್ಸು ಪರಿತಪಿಸುತ್ತಿರುತ್ತದೆ . ನನಗೂ ಒಬ್ಬ ಆತ್ಮೀಯ ಗೆಳೆಯ / ಗೆಳತಿ  ಬೇಕು ಅಂತ ಪ್ರತಿಯೊಂದು ಮನಸ್ಸಿಗೂ ಅನ್ನಿಸಿರುತ್ತದೆ . ಹೀಗೆ  ಆತ್ಮೀಯತೆಯ ಹುಡುಕಾಟದ  ಹಾದಿಯಲ್ಲಿ ನಮ್ಮ ಸನಿಹಕ್ಕೆ ಬಂದು , ನಮ್ಮ ಭಾವನೆಗಳಿಗೆ  ಸ್ಪಂಧಿಸುವಂತಹ  ಮನಸ್ಸಿನೊಂದಿಗೆ ನಮ್ಮ ಅಮೂಲ್ಯವಾದ  ಸ್ನೇಹ  ಆರಂಭಗೊಳ್ಳುತ್ತದೆ . ನಮಗೆ  ಎಲ್ಲರೂ ಗೆಳೆಯ / ಗೆಳತಿಯರಾಗಬಹುದು ಆದರೆ   ಎಲ್ಲರನ್ನೂ ಆತ್ಮೀಯರು ( best friend) ಅನ್ನೋದಕ್ಕೆ  ಸಾಧ್ಯನೇ ಇಲ್ಲ ...



 ಈ  ಆತ್ಮೀಯತೆ  ಅನ್ನೋದು ಹೇಗೆ  ಹುಟ್ಟಿಕೊಳ್ಳುತ್ತದೆಯೋ ಗೊತ್ತಿಲ್ಲ , ಆದರೆ  ಬೇರೆ ಬೇರೆ ಮನಸ್ಥಿತಿಯನ್ನೂ ಅರ್ಥೈಸಿಕೊಳ್ಳುವುದು ,ಭಾವನೆಗಳಿಗೆ  ಪರಸ್ಪರ  ಸ್ಪಂಧಿಸುವ ಪರಿ, ಸುಖ ಕಷ್ಟ ,ದುಃಖ  ಧುಮ್ಮಾನ ಗಳನ್ನು  ಹಂಚಿಕೊಳ್ಳುವ , ಪರಸ್ಪರ ಸಮಾಧಾನ ಪಡಿಸಿಕೊಳ್ಳುವಂತಹ  ಸಂಧರ್ಭಗಳು  ಹೀಗೆ  ಇವೆ ಮೊದಲಾದ  ಸಂಗತಿಗಳು ಆತ್ಮೀಯತೆಗೆ  ತಳಹದಿಯಾಗುತ್ತದೆ . ಆತ್ಮೀಯ ಗೆಳೆತನ  ಹೀಗೆ  ಹಂತ ಹಂತವಾಗಿ  ಮುಂದುವರಿಯುತ್ತಾ ಹೋಗುತ್ತದೆ . ಅನೇಕ  ಸಂಧರ್ಭ ಗಳಲ್ಲಿ  ಕೆಲವು  ಸಣ್ಣ ಪುಟ್ಟ ಮುನಿಸುಗಳೂ ಸಹ  ಬರಬಹುದು ಆದರೆ  ಸ್ನೇಹವೆಂಬ ಪವಿತ್ರವಾದ  ಶಕ್ತಿಯ ಮುಂದೆ  ಆ ಅನುಮಾನ ,ಮುನಿಸುಗಳು  ಹೆಚ್ಚು ದಿನ  ಬದುಕಿ ಉಳಿಯಲಾರವು ( ನಿಮ್ಮ ಸ್ನೇಹ  ಪವಿತ್ರವಾಗಿದ್ದು ಅಷ್ಟು ಆಳವಾಗಿದ್ದರೆ  ಮಾತ್ರ ).
 ಆದರೆ  ಪ್ರಸ್ತುತ  ದಿನಗಳಲ್ಲಿ  ಅದೇಕೋ ಗೊತ್ತಿಲ್ಲ ಹಲವು ಕಾರಣಗಳಿಂದ  ಅನೇಕ  ಸ್ನೇಹ  ಸಂಭಂದಗಳು ಆಗಾಗ್ಗೆ  ಮುರಿದುಬೀಳುತ್ತಿರುತ್ತವೆ . ಸ್ನೇಹ ಅನ್ನೋದು ಕೇವಲ ಕಥೆ ಕವನ ಗಳಲ್ಲಿ, ಚಲನಚಿತ್ರಗಳಲ್ಲಿ  ನೋಡುವುದಕ್ಕಷ್ಟೇ ಸೀಮಿತ  ಹೊರತು  ದೈನಂದಿನ  ಜೇವನದಲ್ಲಿ  ಅದರ  ಮಹತ್ವ  ನಮ್ಮ ಅನುಭವಕ್ಕೆ  ಅಷ್ಟೇ  ನಿಜ  ಎಂಬಂತೆ  ಬರುವುದೇ ಇಲ್ಲ . ಸ್ನೇಹ  ಸಂಭಂದಗಳು  ಏರ್ಪಡುವುದಕ್ಕೆ ಬೇಕಾಗುವಷ್ಟು ಆಸಕ್ತಿ ,ಹೊಂದಾಣಿಕೆಯ ಮನೋಭಾವ ,ತಾಳ್ಮೆ,ಅನುಮಾನಗಳನ್ನು ಮೆಟ್ಟಿ ನಿಲ್ಲುವಂತಹ ಶಕ್ತಿ  ನಮ್ಮ ಜೊತೆಯಲ್ಲಿ ಸದಾ ಇರಬೇಕು . ಹೀಗೆ  ಇದ್ದಾಗ  ಮಾತ್ರ ನಮ್ಮ ಸ್ನೇಹ  ಚಿರವಾಗಿರಲು  ಸಾಧ್ಯ. ಇಬ್ಬರೂ ಪರಸ್ಪರ  ಹೊಂದಿಕೊಂಡು ಎಲ್ಲಾ ವಿಷಯಗಳನ್ನು ಸಮನಾಗಿ ಹಂಚಿಕೊಳ್ಳಬೇಕು . ಪರಸ್ಪರ  ನಿರ್ಲಕ್ಷ್ಯ , ತೆಗಳಿಕೆ ,ಅನುಮಾನ  ಅನ್ನೋದು ಬರಬಾರದು .ಇಬ್ಬರಲ್ಲಿ  ಒಬ್ಬರು ದೂರವಾಗುತ್ತಿದ್ದರೆ  ಎಂದರೆ  ಇನ್ನೊಬ್ಬರು ಆದಷ್ಟು ಅವರನ್ನು ಕಾಪಾಡಿಕೊಳೋದಕ್ಕೆ ಪ್ರಯತ್ನ ಪಡಬೇಕು ಯಾಕಂದ್ರೆ ನಿಮ್ಮ ಸ್ನೇಹ ಸುಮ್ಮನೆ ಏರ್ಪಟ್ಟಿಲ್ಲ  ಅನ್ನೋದು ನೆನಪಿರಲಿ . ಅದರ ಹಿಂದೆ  ಹಲವು ಕಾರಣಗಳಿವೆ, ಹಲವು ಏಳು ಬೀಳು ಗಳೂ ಬಂದಿರುತ್ತವೆ. ನಿಮ್ಮ ಸ್ನೇಹ  ಅಷ್ಟು ಆಳವಾಗಿದ್ದೂ  ಪವಿತ್ರವಾಗಿದ್ದರೆ ಮಾತ್ರ ನಿಮಗೆ  ಅದನ್ನು ಏಕೆ  ಅಳಿಯದಂತೆ  ಉಳಿಸಿಕೊಳ್ಳಬೇಕು ಎಂಬುದರ ಮಹತ್ವ ನಿಮ್ಮ ಅರಿವಿಗೆ ಬಂದಿರುತ್ತದೆ . ಆದರೆ ನನ್ನ ಅನುಭವದ  ಪ್ರಕಾರ  ಸ್ನೇಹ ಪವಿತ್ರವಾಗಿದ್ದರೆ ( ನಿಜವಾದ ಆತ್ಮೀಯತೆ ಯಾಗಿದ್ದರೆ  )  ಪರಸ್ಪರ  ಅನುಮಾನ , ತೆಗಳಿಕೆ , ನಿರ್ಲಕ್ಷ್ಯ ಅನ್ನುವಂತಹ  ಪ್ರಶ್ನೆಯೇ ಬರುವುದಿಲ್ಲ...

 ಇಬ್ಬರ  ಚಿಂತನೆಗಳು , ವ್ಯಕ್ತಿತ್ವ ,ನಡೆ ನುಡಿಗಳಲ್ಲಿ ಹಲವು ವ್ಯತ್ಯಾಸಗಳಿರುತ್ತವೆ  ಆದರೂ ಸಹ  ಆತ್ಮೀಯತೆಯ ಪ್ರಶ್ನೆ ಬಂದಾಗ  ಇಬ್ಬರೂ ಒಂದೇ ಎಂಬ ಚಿತ್ರಣ ಕಾಣುತ್ತದೆ . ಗೆಳೆತನಕ್ಕೆ ಯಾವುದೇ ನಿಯಮವಿರುವುದಿಲ್ಲ , ಭೇಧ ಭಾವ ವಿರುವುದಿಲ್ಲ . ಹೆಣ್ಣು ಗಂಡು ,ವಯಸ್ಸು , ಅವರ ನಡುವಿನ ಅಂತರ  ಹೀಗೆ  ಈ ಮೇಲಿನಂತೆ  ಯಾವುದೇ  ವಿಷಯಗಳು ಅಡ್ಡ ಬರುವುದಿಲ್ಲ .
 ಆದರೆ  ಗಂಡು ಹೆಣ್ಣಿನ ವಿಷಯ ಬಂದಾಗ ಮಾತ್ರ  ಅವರ  ಸ್ನೇಹ  ಎಷ್ಟು ಅಮೂಲ್ಯವಾಗಿದ್ದರೂ , ಎಷ್ಟೇ ಪ್ರಾಮಾಣಿಕವಾಗಿದ್ದರೂ ಸಹ  ಅವರನ್ನು ನೋಡುವವರ  ಧೃಷ್ಟಿ  ಮಾತ್ರ ಬೇರೆಯೇ ಆಗಿರುತ್ತದೆ . ಅವರದು ಪವಿತ್ರವಾದ  ಸ್ನೇಹವಾಗಿದ್ದರೂ ಕೂಡ ನೋಡುವ  ಜನರ  ಧೃಷ್ಟಿಯಲ್ಲಿ  ಅವರು ಪ್ರೇಮಿಗಳಂತೆಯೇ  ಕಾಣುತ್ತಾರೆ , ಅವರ  ನಡುವೆ  ಇಲ್ಲ ಸಲ್ಲದ  ಸಂಭಂದಗಳನ್ನು ಕಲ್ಪಿಸಿಕೊಂಡು ಮಾತನಾಡುವಂತಹ  ಜನರಿಗೆ  ಕೊರತೆಯೇ ಇರುವುದಿಲ್ಲ ......



 " ಅವರಿಬ್ಬರ ನಡುವಿನ  ಗೆಳೆತನ  ಎಷ್ಟು ಮಧುರವಾಗಿತ್ತೆಂದರೆ , ಆಕೆ  ಯಾವುದೇ ಸಂದರ್ಭದಲ್ಲಿ  ಎಂತಹದೇ ಸಹಾಯ ಕೇಳಿದರೂ ಆತ  ಪ್ರಾಮಾಣಿಕತೆಯಿಂದ  ಚಾಚೂ ತಪ್ಪದೆ  ಅವಳ  ಸಹಾಯಕ್ಕೆ ಮುಂದೆ ಬರಿತ್ತಿದ್ದ . ಅವಳ  ಕಷ್ಟ , ದುಃಖ  ಜೊತೆಗೆ  ಅವಳ  ಸುಖ ಸಂತೋಷಗಳಲ್ಲಿಯೂ ಪಾಲುದಾರನಗಿರುತ್ತಿದ್ದ . ರಸ್ತೆ ಬದಿಯಲ್ಲಿ , ಕಾಲೇಜು ಕ್ಯಾಂಪಸ್ ನಲ್ಲಿ  ಸಿಕ್ಕರೆ  ಜೊತೆಯಲ್ಲೇ ನಿಂತು ಮಾತನಾಡೋದು,ಮೊಬೈಲ್ ಗೆ ರಿಚಾರ್ಜ್  ಮಾಡ್ಸೋದು ,ಎಕ್ಸಾಮ್  ಫೀಸ್  ಕಟ್ಟೋದಕ್ಕೆ ಕೊನೆಯ ದಿನ  ಇದ್ದು ಅವಳಿಗೆ  ಏನಾದರೂ ತೊಂದರೆಯಾಗಿದ್ದಲ್ಲ್ಲಿ ಅದನ್ನು ಆತನೇ ಭರಿಸುವುದು, ಅವರ ನಡುವೆ ಮೊಬೈಲ್  ನಲ್ಲಿ ನಿರಂತರ  ಮೆಸ್ಸೇಜು , ಸಂಭಾಷಣೆ  ಹೀಗೆ ಹಲವು ವಿಷಯಗಳು ಸಣ್ಣ ಮನಸ್ಸಿನ  ಕೆಲವು ಜನರಲ್ಲಿ ಇವರ ಬಗೆಗೆ  ಬೇರೆ ತರನಾದ ಭಾವನೆಗಳು , ಇಲ್ಲದ  ಸಂಭಂದಗಳು ಹುಟ್ಟಲು ಕಾರಣವಾಗುತ್ತದೆ . ಹೀಗೆ  ಅವಳ ಕೆಲವು ಸಣ್ಣ ಮನಸ್ಸಿನ ಗೆಳತಿಯರ  ಇಲ್ಲ ಸಲ್ಲದ ಮಾತುಗಳು, ಅವರೇ ಹುಟ್ಟು ಹಾಕುತ್ತಿದ್ದ  ಇಲ್ಲದ  ಸಂಭಂದಗಳು , ಅನುಮಾನ  ಇದೇ ಹತ್ತು ಹಲವು ಕಾರಣಗಳು ಸೇರಿ  ಆಕೆ  ಆತನ ಅಮೂಲ್ಯವಾದ  ಸ್ನೇಹವನ್ನೇ ದಿಕ್ಕರಿಸಿ , ಪರಸ್ಪರ  ಕಣ್ಣೆದುರಿಗೇ ಓಡಾಡಿಕೊಂಡಿದ್ದರೂ ಸಹ  ಈಗ ಅವನ್ಯಾರೋ  ಅವಳ್ಯಾರೋ ........."
 ಹೀಗೆ  ಪವಿತ್ರವಾದ  ಸ್ನೇಹವೂ ಸಹ ಅನುಮಾನಗಳ  ಹುತ್ತ  ಬೆಳೆದು ಹೇಳ ಹೆಸರಿಲ್ಲದಂತೆ  ಮಾಯವಾಗುತ್ತಿದೆ . ಇಲ್ಲಿ ನಾಶವಾದ  ಸ್ನೇಹ ಸಂಭಂದದಲ್ಲಿ  ಇಬ್ಬರ  ಪಾತ್ರವೂ ಇದೆಯಾ ?? ಅಥವಾ ಆಕೆಯದು ಮಾತ್ರ ತಪ್ಪಾ ??  ಅವನ ತಪ್ಪೇನಾದರೂ ಇದೆಯಾ ??  ಈ ರೀತಿಯ ಹಲವು ಪ್ರಶ್ನೆಗಳು ನಮ್ಮ ಕಣ್ಣೆದುರಿಗೆ  ಕಾಣುತ್ತದೆ . ಈ ಪ್ರಶ್ನೆಗಳಿಗೆ  ನಿಮ್ಮ ಉತ್ತರ ?????
 ಅದೇನೇ ಇರಲಿ ನನ್ನ ಅನುಭವದ ಪ್ರಕಾರ  ಅವನ  ಸ್ನೇಹ  ಪವಿತ್ರವಾದದ್ದು  ಅನ್ನೋದು ಮಾತ್ರ ಅಷ್ಟೇ ಸತ್ಯ ಆದರೆ  ಅವಳ  ಅನುಮಾನವೆಂಬ ಹುಚ್ಚು ರೋಗಕ್ಕೆ ಅಮೂಲ್ಯವಾದ  ಸ್ನೇಹ ಬಲಿಯಾದದ್ದು ಮರೆಯಲಾಗದಂತಹ  ನೋವಿನ ಸಂಗತಿ . ಅದೇನೋ ಗೊತ್ತಿಲ್ಲ ಹಲವು  ವಿಷಯಗಳಲ್ಲಿ  ಹುಡುಗರಿಗಿಂತ  ಹುಡುಗಿಯರನ್ನು ನಂಬೋದೇ  ತುಂಬಾ ಕಷ್ಟ . ಮೊನ್ನೆ ನನ್ನ ಬಾಲ್ಯದ ಗೆಳತಿ ಈ ಮೇಲಿನ ವಿಷಯದ ಬಗ್ಗೆ  ಮಾತನಾಡುತ್ತಾ  ಹೇಳಿದಳು - "  ನಾನು  ಹುಡುಗಿಯಾಗಿ ಹೇಳ್ತಾ ಇದೀನಿ , ಹುಡುಗರು ಹುಡುಗಿಯರ ಜೊತೆ ಗೆಳೆತನ ಇಟ್ಕೋಬಾರದು , ಅವರಿಂದ  ಎಷ್ಟು ಸಹಾಯ ಆಗುತ್ತೋ  ಅಷ್ಟನ್ನು ಬಳಸಿಕೊಂಡು ಮತ್ತೆ  ಬಿಟ್ ಹಾಕ್ತಾರೆ , ಎಲ್ಲರಿಗೂ ಆತ್ಮೀಯ ಗೆಳೆತನದ ಮಹತ್ವ ಗೊತ್ತಿರೋದಿಲ್ಲ ...."  ಹೀಗೆ  ಅವಳು ಹೇಳಿದ  ಪ್ರತಿಯೊಂದು ಮಾತು ನನಗೆ  ತಕ್ಕ ಮಟ್ಟಿಗೆ ಸರಿ ಅನ್ನಿಸಿತು  ಏಕೆಂದರೆ  ನನ್ನ ಅನುಭವದ ಜೊತೆ  ಅವಳ  ಮಾತು ಹೊಂದಿಕೆಯಾಗಿತ್ತು ....
 ನಮ್ಮ ಸ್ನೇಹ ಅತೀ ಆಳವಾಗಿದ್ದು ಅಮುಲ್ಯವಾಗಿದ್ದರೆ , ಪ್ರೇಮಿಗಳ ಪ್ರೀತಿ ಹಟಾತ್ತನೆ  ಮುರಿದು ಬಿದ್ದಾಗ ಅದೆಷ್ಟು ನೋವಾಗುತ್ತದೋ  ಅದಕ್ಕಿಂತ  ಅತೀ ಹೆಚ್ಚು ನೋವು ಈ ಪವಿತ್ರ ಸ್ನೇಹ ಸಂಭಂದ ಮುರಿದುಬಿದ್ದಾಗ  ಅನುಭವಕ್ಕೆ ಬರುತ್ತದೆ . ನಿಮ್ಮ ಸ್ನೇಹ ಪವಿತ್ರವಾಗಿದ್ದು , ನಿಮ್ಮ ತಪ್ಪಿಲ್ಲದೇ, ಮುರಿದು ಬಿದ್ದ ಸ್ನೇಹದ ಮರುಜೀವಕ್ಕಾಗಿ  ನಿಮ್ಮ ಮನಸ್ಸು ಪರಿತಪಿಸುತ್ತಿದ್ದು , ನಿಮ್ಮ ಗೆಳೆಯ / ಗೆಳತಿಯಿಂದ  ಪುನಃ  ಪುನಃ  ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದು , ಸ್ನೇಹದ  ಮರು ಹುಟ್ಟೇ ಕಷ್ಟ ಎನ್ನಿಸಿದರೆ  ದಯವಿಟ್ಟು ನಿಮ್ಮ ಪ್ರಯತ್ನವನ್ನು ಅಲ್ಲಿಗೆ  ಬಿಟ್ಟು ಬಿಡಿ . ಕೊನೆಯ ಬಾರಿ  ನಿಮ್ಮ ಸಂತೋಷಕ್ಕಾಗಿಯಾದರೂ ಮರೆಯಲಾಗದ ಒಂದು ಕಾಣಿಕೆಯನ್ನು  ಅವರಿಗೆ  ತಲುಪಿಸಿ ಅವರ ಜೀವನದಿಂದ  ಹೊರಬಂದುಬಿಡಿ . ಈ  ಕಾಣಿಕೆ ಏಕೆಂದರೆ ಅವರಿಗೆ ಜೀವಕ್ಕೆ ಜೀವ ಕೊಡುವಂತಹ  ಸ್ನೇಹಕ್ಕಿಂತ ಹೆಚ್ಚು ನಿರ್ಜೀವಿಗಳ  ಮೇಲೆಯೇ  ನಂಬಿಕೆ ...!!!!  ನಮಗೆ  ನಮ್ಮಂತಹ  ಪವಿತ್ರವಾದ  ಹೃದಯವಂತರೇ ಗೆಳೆಯರಾಗಿ , ಆತ್ಮೀಯರಾಗಿ  ನಮ್ಮ ಜೀವನದ  ಹಾದಿಯಲ್ಲಿ  ಮತ್ತೆ  ಬರುತ್ತಾರೆ  ಎನ್ನುವ  ಆತ್ಮ ವಿಶ್ವಾಸದೊಂದಿಗೆ  ನಮ್ಮ ಮುಂದಿನ  ಸಂತಸದ  ದಿನಗಳೆಡೆಗೆ  ನಮ್ಮ ಜೀವನದ ಪಯಣ ಸಾಗುತ್ತಿರಬೇಕು ..............................

Sunday, 15 January 2012

ಕಳೆದು ಹೋದ ಗೆಳ(ತಿಯ)ತನದ ನೆನಪಲ್ಲಿ ................





 ಸ್ನೇಹ ಅತ್ಯಂತ ಅಮೂಲ್ಯವಾದ ಸಂಭಂದ ಆಲ್ವಾ??? ಪ್ರೀತಿ ಸ್ನೇಹ ಸಂಭಂದಗಳು ಹೇಗೆ ಹುಟ್ಟುತ್ತೋ,ಹೇಗೆ ಸಾಯುತ್ತೋ ಗೊತ್ತಾಗೋದೆ ಇಲ್ಲ ..... ಇಂತಹ ಸಂಭಂದಗಳನ್ನ ಕೊನೆಯವರೆಗೂ ಉಳಿಸುಕೊಂಡು ಹೋಗೋದೇ ಒಂದು ದೊಡ್ಡ ಸಾಧನೆ ಅಂತ ಹೇಳ್ಬೋದು .... ಎಲ್ಲರ ಜೀವನದಲ್ಲೂ  ಇಂತಹ ಅಮೂಲ್ಯ ಸಂಭಂದಗಳು ಸೃಷ್ಟಿಯಾಗುವುದು ಬಹಳ ವಿರಳ .... ಹೇಗೋ ಹುಟ್ಟಿಕೊಂಡಂತಹ ಇಂತಹ ಸಂಭದಗಳು ಬಹು ಬೇಗ ಅಸ್ತಿತ್ವ ಕಳೆದುಕೊಳೋದಕ್ಕೆ ಬಲವಾದ ಕಾರಣಗಳೇ ಬೇಕಾಗುತ್ತೆ... ಆದರೆ ಕಾರಣವಿಲ್ಲದೆ ಈ ಸಂಭಂದಗಳು ನಶಿಸಿದಾಗ ಆಗುವ ನೋವುಗಳ ಜೊತೆಗೆ ಮುಂದಿನ ಜೀವನ ನಡೆಸುವುದು ಸಾಧ್ಯನಾ....?????
  ಹಳೆಯ ಗೆಳೆಯ/ಗೆಳತಿ ಯೊಂದಿಗೆ ಕಳೆದ ಸಂತಸದ ದಿನಗಳ ನೆನಪಲ್ಲಿ ಬದುಕುವುದು ಹೇಗೆ ಅನ್ನೋದು ಇವಾಗ ಅನುಭವಕ್ಕೆ ಬರ್ತಾ ಇದೆ ......  ನೀನು ನನ್ನ ಲೈಫ್ ನಲ್ಲಿ ಬಂದಿದ್ದೆ ಆಶ್ಚರ್ಯ ,ಆದ್ರೆ ಇಷ್ಟೊಂದು ಬೇಗ ನಾನು ನಿನಗೆ ಬೇಡ ಆಗ್ತೀನಿ ಅನ್ನೋದೆ ಗೊತ್ತಿರ್ಲಿಲ್ಲ .... ಒಂದುವೇಳೆ ಈ ವಿಷಯ ಮೊದಲೇ ಗೊತ್ತಿದ್ರೆ ನಿನ್ ಲೈಫ್ ನಲ್ಲಿ ನಾನು ಬರ್ತಾನೆ ಇರ್ಲಿಲ್ಲ ... ಹಾಯಾಗಿದ್ದ ಜೀವನದಲ್ಲಿ ಇಷ್ಟೊಂದು ನೋವಿನ ನೆನಪುಗಳನ್ನು ಬಿಟ್ಟು ಮರೆಯಾಗಿ ಹೋದೆ.... ನನ್ನಿಂದ ದೂರ ಹೋಗೋದಕ್ಕೆ ಕಾರಣವಾದರು ಹೇಳಿ ಹೋಗಬಾರದಿತ್ತೆ....???
 ನಿನ್ನ ನೆನಪುಗಳ ಜೊತೆ ನನ್ನ ಬಳಿ ಉಳಿದಿರುವುದು ಕೇವಲ ಉತ್ತರ ಸಿಗದ ಪ್ರಶ್ನೆಗಳು..... ಸಂಭಂದದ ಕೊಂಡಿ ಕಳಚಿದ ಕಾರಣವಾದರು ತಿಳಿಸಿ ಹೋಗಬಹುದಿತ್ತಲ್ವಾ.....
 ಕೇವಲ ಅತೀ ಕಡಿಮೆ ಅವದಿಯಲ್ಲಿ ನನ್ನ ನಿನ್ನ ಸ್ನೇಹ ಪ್ರಾರಂಭ ಆಗಿದ್ದು. ನಮ್ಮ ಮೊದಲ ದಿನಗಳು ಅದೆಷ್ಟು ಮಧುರ.... ನೀನು ನನ್ನ ಜೊತೆ ಕಳೆದ ದಿನಗಳು,ಹಂಚಿಕೊಂಡ ಭಾವನೆಗಳು ನಾ ಹೇಗೆ ಮರೆಯಲಿ...?? ಸಣ್ಣ ಮಗುವಿನಂತಿದ್ದ ನಿನ್ನ ಮನಸ್ಸು ಇಷ್ಟೊಂದು ಕ್ರೂರೀನಾ...??
 ನಿನಗಾಗಿ ಕಳೆದ ಆ ದಿನಗಳು ಈಗ ವ್ಯರ್ಥ ಅನ್ನಿಸುತ್ತಿದೆ..  ಸಂಭಂದ ಅರ್ಥವೇ ಗೊತ್ತಿಲ್ವಾ ನಿನಗೆ..?? ನಿನ್ನ ಜೀವನದ ಕೊನೆಯ ಉಸಿರಿನ ವರೆಗೂ ನನ್ನ ಸ್ನೇಹವನ್ನು ಉಳಿಸಿಕೊಳ್ತಿನಿ ಅಂತ ಹೇಳಿದ್ದು ಬರೀ ಸುಳ್ಳು ಅಲ್ವಾ...??
 " ಏ ದೋಸ್ತಿ ಹಮ್ ನಹೀ ಚೋಡೆಂಗೆ  ..."  ಸಾಂಗ್ ಇಷ್ಟ ಅಂತ ಹೇಳಿದ್ದೆ,, ಆದ್ರೆ ಇದರ ಅರ್ಥವೇ ನಿನಗೆ ತಿಳಿದಿಲ್ಲ ಅಂತ ಈಗ ಅನ್ನಿಸ್ತಾ ಇದೆ... ನನ್ನ ಎಲ್ಲ ಗೆಳೆಯ ಗೆಳತಿಯರಿಗಿಂತ ನೀನು ಅದೆಷ್ಟೋ ಭಿನ್ನ ... ನಿನ್ನ ಜೊತೆಗೆ ಕಳೆದಿದ್ದು ಕೇವಲ ಎರಡು ವರ್ಷಗಳು... ಕೇವಲ ಈ ಎರಡು ವರ್ಷಗಳಲ್ಲಿ ನನ್ನಲ್ಲಿ ನೀನು ತಂದ  ಅನೇಕ ಬದಲಾವಣೆಗಳು , ನನ್ನ ನೊಂದ ಮನಸ್ಸಿಗೆ ನೀನು ಕೊಟ್ಟ ಸಮಾಧಾನ,ಧೈರ್ಯ,ನನ್ನಲ್ಲಿ ಮೂಡಿಸಿದ ಆಶಾಭಾವನೆ, ಸಂತೋಷ  ಅದೆಷ್ಟೋ.... 
 ಆದರೆ ಈಗ ಅದೆಲ್ಲಕ್ಕಿಂತ ದೊಡ್ಡ ನೋವಿಗೆ ನೀನೆ ಕಾರಣಲಾದೆ.. 
ನಿನ್ನ ಜೀವನ ನಿನ್ನ ಇಷ್ಟದಂತೆ ಇರಬೇಕು , ಬೇರೆಯವರು ನಿನ್ನ ಜೀವನವನ್ನು ನಿಯಂತ್ರಿಸಬಾರದು.. ಈ ಪ್ರಪಂಚದಲ್ಲಿ ಪರರ ಜೀವನದ ಬಗ್ಗೆ ಮಾತಾಡೋದಕ್ಕೆ ಎಲ್ರಿಗೂ ಬರುತ್ತೆ ಆದರೆ ಅವರ ಜೀವನದ ಬಗ್ಗೆ ಹೊರತು ಪಡಿಸಿ...ನಮಗೆ ಅನ್ನಿಸಿದ್ದನ್ನು ನಾವು ಮಾಡೋದನ್ನ ಕಲಿಬೇಕು.. ನಾವು ಏನೇ ಮಾಡಿದ್ರು ಅದರ ಬಗ್ಗೆ ಜನರು ಏನಾದ್ರು ಹೇಳೋದಕ್ಕೆ ಕಾಯ್ತಾ ಇರ್ತಾರೆ.. ಯಾರದ್ದೋ ಮಾತನ್ನು ಕೇಳಿ ನನ್ನ ಸ್ನೇಹವನ್ನೇ ದಿಕ್ಕರಿಸಿ ಹೋಗಿರುವೆ.. ಹೋಗುವುದಕ್ಕೂ ಮುನ್ನ ಒಮ್ಮೆ ಯೋಚಿಸಬಹುದಿತ್ತು.....
 ನಿನ್ನ ಜೊತೆ ನಾನು ಕಳೆಯಬೇಕೆಂದಿದ್ದ ಸಾವಿರಾರು ಆಸೆ ಆಕಾಂಕ್ಷೆಗಳು ನುಚ್ಚು ನೂರಾದಂತಿದೆ . ನಿನ್ನ ಜೊತೆ  ಕ್ಯಾಂಪಸ್ ನಲ್ಲಿ  ಸುತ್ತಬೇಕು, ನಿನ್ ಜೊತೆ  ಸಭೆ ಸಮಾರಂಭಗಳಲ್ಲಿ ಭಾಗವಹಿಸಬೇಕು , ನಿನ್ ಜೊತೆ ಮೂವಿ ನೋಡ್ಬೇಕು , ನನ್ನ ನಿನ್ನ ಜನುಮದಿನದ ಸಂತೋಷ ಗಳನ್ನೂ ಜೊತೆಯಲ್ಲೇ ಆಚರಿಸ ಬೇಕೆಂದಿದ್ದೆ ..... ಆದರೆ ಈ ಮೇಲಿನ  ಯಾವುದೇ ವಿಷಯಗಳಲ್ಲಿ ನಿನಗೆ ಆಸಕ್ತಿ ಇಲ್ಲ , ನಿನಗೆ  ಇದು ಯಾವುದೂ ಇಷ್ಟ ಆಗೋದಿಲ್ಲ ಅನ್ನೋದು ನನಗೆ  ಗೊತ್ತಿತ್ತು , ಯಾಕಂದ್ರೆ ನೀನು ನಮ್ಮನ್ನು ನೋಡೋ ಜನ ನಮ್  ಬಗ್ಗೆ  ಏನೇನೋ  ಮಾತಾಡ್ಕೊತಾರೆ  ಅಂತ  ಭಯ ಪಡ್ತಿದ್ದೆ , ನೀನು ಬದುಕ್ತಾ ಇರೋದೇ  ಬೇರೆಯವರ  ದೃಷ್ಟಿ ಕೋನದಲ್ಲಿ  ಆಲ್ವಾ...?? ನಿನಗೆ  ಇದರಿಂದ  ನೋವು  ಆಗಬಾರದು ಅಂತಾನೆ  ನನ್ನ ಈ ಮೇಲಿನ  ಯಾವುದೇ  ಆಸೆಗಳನ್ನು ನಿನ್  ಬಳಿ  ಹೇಳದೆ  ಸುಮ್ಮನಿದ್ದೆ .. ನಿನ್ನನ್ನು  ನಿನ್ನ  ಮನಸ್ಸನ್ನು ಇಷ್ಟು ಆಳವಾಗಿ  ಅರ್ಥ  ಮಾಡಿಕೊಂಡಿದ್ದ  ಈ ಪುಟ್ಟ ಮನಸ್ಸನ್ನೇ  ನೀನು  ಹೀಗೆ  ದಿಕ್ಕರಿಸಿ  ಹೋಗಬಹುದಿತ್ತ್ತೆ ...??  
      ನಮ್ಮನ್ನು ತುಂಬಾ ಆಳವಾಗಿ  ಅರ್ಥ  ಮಾಡ್ಕೊಂಡು , ನಮಗೆ  ನೋವಾಗದಂತೆ , ನಮ್ಮ  ಇಷ್ಟದಂತೆ  ಅವರ  ಜೀವನ  ಶೈಲಿ ಯನ್ನೇ  ನಮಗಾಗಿ  ಬದಲಾಯಿಸಿಕೊಂಡು , ನಮಗಾಗೆ  ಬದುಕನ್ನೇ  ಮುಡಿಪಾಗಿ  ಇಡೋ ಅಂತ  ವ್ಯಕ್ತಿಗಳು  ನಾವು ಹುಡುಕಿದರೂ  ಸಿಗೋದು  ತುಂಬಾ ಕಷ್ಟ. ಇದು ನಿನಗೆ ಅರ್ಥ ಆಗ್ಬೋದು ಅಂತ ಅಂದ್ಕೊಂಡಿದೀನಿ .............  ಇದಕ್ಕಿಂತ  ಜಾಸ್ತಿ ಹೇಳೋದಕ್ಕೆ ನನಗೆ ಬರೋದಿಲ್ಲ .. 
                                ಈಗಲು ಸಹ ನಿನ್ನ ಬರುವಿಕೆಯನ್ನೇ ಬಯಸುತ್ತಿರುವೆ.. ಏಕೆಂದರೆ ನಿನ್ನ ಮೊದಲಿನ ಗೆಳೆತನದ ಪ್ರಭಾವ ನನ್ನನ್ನು ಕಾಯುವಂತೆ ಮಾಡಿದೆ.. ನನ್ನ ಅರಿವಿಗೆ ಬಾರದೆ ನನ್ನಿಂದ ನಿನ್ನ ಮನಸ್ಸಿಗೆ ಏನಾದರು ನೋವಾಗಿದ್ದರೆ ಅದನ್ನು ಮನ್ನಿಸಿ ನಮ್ಮ ಸ್ನೇಹಕ್ಕೆ ಮರು ಜೀವ ಕೊಡು ... ಈ ಜೀವನದಲ್ಲ್ಲಿ ನಿಜವಾದ ಸಂಭದಗಳು ಸೃಷ್ಟಿಯಗುವುದೇ ವಿರಳ .. ನನ್ನ ನಿನ್ನ ನಡುವಿನ ಅಂತಹದ್ದೊಂದು  ಬಾಡಿ ಹೋಗಿರುವ ಅಮೂಲ್ಯವಾದ ಸಂಭದಕ್ಕೆ ಮತ್ತೆ ನೀರೆರೆದು ಜೀವ ನೀಡು.....  ನೀನಿರದ ಈ ಜೀವನ ವ್ಯರ್ಥ ಅನ್ನಿಸುತ್ತಿದೆ..... ನಿನಗಾಗಿ ನನ್ನ ಹೃದಯದ ಬಾಗಿಲು ಸದಾ ತೆರೆದಿರುತ್ತದೆ... ನೀ ಬರುವ ಹಾದಿಯನ್ನೇ ಎದುರು ನೋಡುತ್ತಿರುವೆ........... 
                                     
                       ಇಂತಿ ನಿನ್ನ ಪ್ರೀತಿಯ ಗೆಳೆಯ .......  

Friday, 11 November 2011

ಹೋಗಲಿರುವ ಜೀವಕ್ಕೆ ಅದೆಷ್ಟು ಆಸೆಗಳೋ..........




       ನಮ್ಮ ಜೀವನ ಪ್ರಾರಂಭ ಅಗೋದೇ ಬಹುಶ ಆಸೆಗಳಿಂದ ಅನ್ಸುತ್ತೆ , ಎಲ್ರಿಗೂ ಅವರದ್ದೇ ಆದ ಅನೇಕ ಆಸೆ ಗಳಿರುತ್ತೆ . ತಮ್ಮ ಜೀವಕ್ಕಿಂತ ಹೆಚ್ಚಿನ ಆಸೆಗಳಿರೊ ಅಂತ ಅನೇಕರನ್ನ ನಾವ್ ನೋಡಬೋದು ... ಮರೆಯಾಗಿ ಹೋಗುವ ಈ ಜೀವಕ್ಕೆ ಅದೆಷ್ಟು ಆಸೆಗಳಿರುತ್ತೆ ಅಲ್ವಾ ...???
ನಾವು ಚಿಕ್ಕವರಾಗಿದ್ದಾಗ ಚಾಕೊಲೇಟ್ , ಗೊಂಬೆ ಗಳನ್ನೆಲ್ಲ ನೋಡ್ದಾಗ ಅದು ಬೇಕೇ ಬೇಕು ಅನ್ನೋ ಹಠ ,ಆಸೆ ಇರ್ತಿತ್ತು . ದೊಡ್ದವರಾಗ್ತಾ ಬಂದ್ ಹಾಗೆ ನಮ್ಮ ಆಸೆಗಳ ಲೋಕವೇ ಬದಲಾಗ್ತಾ ಹೋಗತ್ತೆ ... ನಮ್ಮ ಆಸೆ ಆಕಾಂಕ್ಷೆ ಗಳಿಗೆ ಮಿತಿನೇ ಇಲ್ವೇನೋ ಅನ್ಸತ್ತೆ . ನನಗು ಸಹ ತುಂಬಾ ಆಸೆಗಳಿದ್ವು ,ಬೆಟ್ಟದಷ್ಟು  ಆದ್ರೆ ಇವಾಗ ಅದೆಲ್ಲ ಬರಿ ಕನಸು ಅನ್ನಿಸ್ತಾ ಇದೆ.... :(
 ನಾನು ಅನೇಕರನ್ನ ನೋಡಿದೀನಿ ಅವರ ಜೀವನ ಶೈಲಿ , ಆಸೆಗಳನ್ನೆಲ್ಲ ನೋಡಿದ್ರೆ ನಗಬೇಕೋ , ಅಳಬೇಕೋ ಒಂದೂ ಗೊತ್ತಾಗಲ್ಲ ....  ತುಂಬಾ ವಿಷಯಗಳಿದೆ ಆದ್ರೆ ನನಗೆ ಗೊತ್ತಿರೋ ಸ್ವಲ್ಪ ವಿಷಯಗಳನ್ನ ನಾನ್ ನಿಮ್ ಜೊತೆ ಶೇರ್ ಮಾಡ್ಕೋತಾ ಇದೀನಿ.....

 ವಿದ್ಯಾರ್ಥಿ ಜೀವನದಲ್ಲಿ ಅನೇಕ ಆಸೆಗಳಿರುತ್ತೆ , ಎಲ್ರಿಗಿಂತ ಜಾಸ್ತಿ ಮಾರ್ಕ್ಸ್ ತಗೋಬೇಕು,ಕ್ಲಾಸ್ ನಲ್ಲಿ ಫಸ್ಟ್ ಬರಬೇಕು ಹೀಗೆ ಹಲವು ಆಸೆಗಳಿರುತ್ತೆ... ಅಯ್ಯೋ ಪರೀಕ್ಷೆ ಲಿ ಪಾಸ್ ಆದ್ರೆ ಸಾಕು ಅನ್ನೋ ನಮ್ ತರದವರೂ ಇದಾರೆ... ಪರೀಕ್ಷೇಲಿ ತುಂಬಾ ಕಡಿಮೆ ಮಾರ್ಕ್ಸ್ ಬಂತು , ಫೇಲ್ ಅದೆ ಅಂತ ಅದೆಷ್ಟೋ ಜನ ಆತ್ಮಹತ್ಯೆ ಮಾಡ್ಕೊಂಡಿರೋ ಹಾಸ್ಯದ ಸಂಗತಿಗಳೂ ಇದೆ.  ಜೀವನವೇ ಒಂದು ಪರೀಕ್ಷೆ ಅಂತ ಅವರೆಲ್ಲ ತಿಳ್ಕೊಂಡಿದ್ದಿದ್ರೆ ಅವರೆಲ್ಲ ಈ ರೀತಿ ಮಾಡ್ಕೋತಾ ಇರ್ಲಿಲ್ಲ....ನಮ್ಮ ಜೀವಿತಾವದಿಯಲ್ಲಿ ನಮಗೆ ಅದೆಷ್ಟೋ ಸಮಯವಿದೆ , ಏನ್ ಬೇಕಾದ್ರು ಸಾದಿಸ್ಬೋದು ಅಲ್ವಾ ?? ಇಷ್ಟು ಸಣ್ಣ ವಿಷಯಕ್ಕೆಲ್ಲ ಜೀವಾ ನೆ ನಾಶ ಮಾಡ್ಕೊಬೇಕಾ..?? ಒಂದ್ ಕ್ಷೇತ್ರದಲ್ಲಿ ಆಗ್ಲಿಲ್ಲ ಅಂದ್ರೆ ಇನ್ನೊಂದ್ ಕ್ಷೇತ್ರದಲ್ಲಿ ಸಾದನೆ ಮಾಡ್ಬೋದು , ಅದು ಬಿಟ್ಟು ನಮ್ಮನ್ನೇ ನಂಬಿಕೊಂಡಿರುವ ಜೀವಗಳಿಗೆ ನಾವ್ ಮೋಸ ಮಾಡಬಾರದು .....

      ಆರೋಗ್ಯ ದ ಮೇಲೆ ಹೆಚ್ಚು  ಕಾಳಜಿ ವಹಿಸೋ ಜನ ತುಂಬಾ ಇದಾರೆ. ಮಳೇಲಿ ನೆನೆದರೆ ಜ್ವರ ಬರುತ್ತೆ,ಶೀತ ಆಗುತ್ತೆ  ಅಂತಾ ತುಂಬಾ ಕಾಳಜಿ ತಗೊಳೋರು ದಿನಕ್ಕೆ ಐದು ಆರು ಸಿಗರೇಟ್ ಕಾಲಿ ಮಾಡ್ತಾ ಇರ್ತಾರೆ, ಯಾರಾದ್ರೂ ಸ್ಮೋಕ್ ಮಾಡ್ತಾ ಇರೋವಾಗ ತಮ್ಮ ಮೂಗುಗಳನ್ನು ಭದ್ರವಾಗಿ ಮುಚ್ಚಿಕೊಂಡು ಓಡಾಡುವವರೂ ಅನೇಕ !!!

 ಮುಂದೆ ನಮ್ಮ ಜೀವನಕ್ಕೆ ಬೇಕು ಅಂತ ,ಇವತ್ತಿನ ಜೀವನದ ಬಗ್ಗೆ ಯೋಚಿಸದೆ ಹಣ ಕೂಡಿಡುವ ಅದೆಷ್ಟೋ ಜನ ಇದ್ದಾರೆ, ಇವತ್ತು ಒಂದು ರೂಪಾಯಿ ಖರ್ಚು ಮಾಡಲು ಚಿಂತಿಸುವವರು ಮುಂದಿನ ಜೀವನದ ಬಗ್ಗೆ ಯೋಚಿಸುವುದು ಅದೆಷ್ಟು ಸರಿ ..???  ನಾನು ಒಂದು ವರ್ಷದ ಹಿಂದೆ  ಶಿವಮೊಗ್ಗ ದಿಂದ ಹಾಸನ ಕ್ಕೆ ರೈಲಿನಲ್ಲಿ ಹೋಗುವಾಗ ಕೇಳಿದ  ಒಂದು ನೈಜಗಟನೆ -
  " ತುಂಬಾ ಸಂತಸದ ಫ್ಯಾಮಿಲಿ, ಅಪ್ಪ ಅಮ್ಮ ಮಗ ಮಗಳು  ಕೇವಲ ನಾಲ್ಕು ಜನರ ಪುಟ್ಟ ಫ್ಯಾಮಿಲಿ , ಅತ್ಯಂತ ಸಂತೋಷದಿಂದಲೇ ಜೀವನ ನಡೀತಾ ಇತ್ತು.... ತಮ್ಮ ಮಗನ ವಿದ್ಯಾಭ್ಯಾಸಕ್ಕೆ ಅಪ್ಪ ತುಂಬಾ ಕಷ್ಟ ಪಟ್ಟು ಹಣ ಸಂಪಾದಿಸಿದ್ರಂತೆ , ಹಾಗೆ  ಅವನ ವಿದ್ಯಾಭ್ಯಸಾನೂ ನಡೀತಾ ಇತ್ತು. ಬೇರೆ ವಿಷಯಗಳಿಗೆ ಹಣ ಖರ್ಚು ಮಾಡೋಕೆ ಮೊದ್ಲು ಆತ ತುಂಬಾ ಯೋಚಿಸ್ತಾ ಇದ್ರು, ಮಗಳ ಮದುವೆಗೆ ಅಂತ ಸಹ ಹಣ ಕೂಡಿಟ್ಟಿದ್ರು. ಜನ ಅವರನ್ನ ಜಿಪುಣ ಅಂತ ಕರಿತಾ ಇದ್ರು..ಮುಂದಿನ ಜೀವನದ ಬಗ್ಗೆ ತುಂಬಾ ಯೋಚನೆಗಳಿದ್ದಿದ್ರಿಂದ ಅವ್ರು ಜಿಪುಣ ಆಗಿದ್ರು ಅನ್ಸತ್ತೆ. ಹೀಗೆ ಜೀವನ ನಡೀತಾ ಇತ್ತು , ಮಗಳು ಪಿ.ಯೂ.ಸಿ ಗೆ ವಿಧ್ಯಾಭ್ಯಾಸ ಮುಗ್ಸಿದ್ಲು , ನಂತರ ಎರಡು ವರ್ಷಗಳಲ್ಲಿ ಅವಳ ಮದುವೆನೂ ಆಯ್ತು.... ದುರದೃಷ್ಟ ಅಂದ್ರೆ ಮದುವೆ ಆಗಿ ಒಂದು ವರ್ಷದೊಳಗೆ ಭೀಕರ ರಸ್ತೆ ಅಪಘಾತದಲ್ಲಿ ಮಗಳು ಅಳಿಯ ಇಬ್ರೂ ವಿಧಿವಶರಾದರು... ಇತ್ತ ಮಗನ ವಿದ್ಯಾಭ್ಯಾಸನೂ ಮುಗಿತಾ ಬಂದಿತ್ತು .. ಮಗಳ ನೆನಪು ಮಾಸುತ್ತಾ ದಿನಗಳು ಉರುಳುತ್ತಿತ್ತು ..ಇವರ ಜೀವನದ ಅತ್ತ್ಯಂತ ಅಹಿತಕರ ಘಟನೆ ಅಂದ್ರೆ .. ಮಗ  ಎಂ.ಎ  ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾಗ ಅದೇನೋ ಜ್ವರ ಅಂತ ಬಂದು ಮೂರೇ ದಿನದಲ್ಲಿ ಇಹಲೋಕ ತ್ಯಜಿಸಿದ್ದು.... ನೋವಿನ ಮೇಲೆ ನೋವು ಅನುಭವಿಸುತ್ತ ಎರಡು ಜೀವಗಳು ಅದೆಷ್ಟು ದಿನ
ಬದುಕಿರಬಹುದು..... ಚಿಂತೆಯಲ್ಲೇ ಜೀವನ ಸಾಗುತ್ತಿದೆ ... ಕೂಡಿಟ್ಟ ಅಷ್ಟೊಂದು ಹಣ,ಆಸ್ತಿ ಪಾಸ್ತಿ ಯಾರ ಪಾಲಿಗೆ...?? ಅವರ ಕಡೆಯವರು ಅಂತ ಅವರಿಗೆ ಯಾರೂ ಇಲ್ವಂತೆ.. ಅವರ ಮುಂದಿನ ಗತಿ....?????? "
    ನೋಡಿದ್ರಾ ಆಸೆಗಳು  ಎಷ್ಟೊಂದು ಅಲ್ವಾ....???

         ಮತ್ತೊಂದು ಸಂಗತಿ ಅಂದ್ರೆ ಅನೇಕರು ನಮ್ ಫ್ರೆಂಡ್ಸ್ ನಮ್ ಜೊತೆ ನಾವ್ ಅಂದ್ಕೊಂಡಿರೋ ಹಾಗೆ ಇರ್ಬೇಕು ಅನ್ನೋ ಆಸೆ ಇಟ್ಕೊಂಡಿರ್ತಾರೆ ,ಅವರ ಜೀವನ ಶೈಲಿ ಇವರಿಗೋಸ್ಕರ ಬದಲಾಗಬೇಕೆ...?? ಇವರ ಆಸೆ ಆಕಾಂಕ್ಷೆ ಗಳಂತೆ ಅವರಿಗೂ ಇರುತ್ತೆ ಅನ್ನೋದನ್ನ ಮರೆತು  ಅವರ ಸ್ನೇಹವನ್ನೇ ದೂರ ಮಾಡಿಬಿಡ್ತಾರೆ ... ಸ್ನೇಹಿತರು ಒಬ್ರಿಗೊಬ್ರು ಅರ್ತ ಮಾಡ್ಕೊಂಡು , ಹೊಂದ್ಕೊಂಡು ತಮ್ಮ ಸ್ನೇಹನಾ ಶಾಶ್ವತವಾಗ್ ಇರೋಹಾಗ್ ಮಾಡ್ಕೋಬೇಕು , ಕೇವಲ ಆಸೆಗಲಿಗೋಸ್ಕರ ಸ್ನೇಹವನ್ನು ಬಲಿ ಕೊಡಬಾರದು... ಸ್ನೇಹ ಅತ್ಯಂತ  ಅಮೂಲ್ಯವಾದದ್ದು.. ಎಲ್ರಿಗೂ ಅಂತಹ ಅಮೂಲ್ಯ ವಾದ ಸ್ನೇಹ ಸಿಗೋದಿಲ್ಲ .... ಸೀಕ್ಕಿದ್ದನ್ನ ಹಾಳ್ಮಾಡ್ಕೋಬೇಡಿ ......

         ಪ್ರೀತಿ ವಿಷಯಕ್ಕೆ ಬಂದ್ರೆ ಅಲ್ಲೂ ಸಹ ಇಂತಹ ಹಲವು ಆಸೆಗಳಿಂದ ಆಗುವ ದುಷ್ಪರಿಣಾಮಗಳು ಅನೇಕ... ನಾನು ಪ್ರೀತಿಸಿದ ಹುಡುಗ/ಹುಡುಗಿ ಸಿಗ್ಲಿಲ್ಲ ಅಂತ ಅದೆಷ್ಟೋ ಜನ ಆತ್ಮಹತ್ಯೆ ಮಾಡ್ಕೊಂಡಿರೋ ಸಂಗತಿಗಳು ಹಲವಾರು...  ತಮ್ಮ ತಂದೆ ತಾಯಿ ಬಂಧು ಬಳಗ ದವರ ಯೋಚನೆ ಇಲ್ಲದೆ ಕೇವಲ ಕೆಲವು ಕೆಲವು ದಿನಗಳ ಹಿಂದೆ ಹುಟ್ಟಿಕೊಂಡ ಪ್ರೀತಿ ಸಿಗಲಿಲ್ಲ ವೆಂದು , ಜನ್ಮತಃ ವಾಗಿ ಸಿಕ್ಕ ಪ್ರೀತಿಯನ್ನೇ ದಿಕ್ಕರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದು ಅದೆಷ್ಟು ಸರಿ..??? ನನ್ನ ಗೆಳೆಯನೂ ಸಹ ಇಂತಹ ಒಂದು ಹೀನ ಕೃತ್ಯಕ್ಕೆ ಸಾಕ್ಷಿ ಯಾಗಿದ್ದಾನೆ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಬೇಸರ..... ಅವನ ಅಗಲಿಕೆಗಿಂತ ಅವನ ಪೋಷಕರ ಕಣ್ಣೀರಿನ ನೋವಿನ ದಿನಗಳು ನೆನೆಸಿಕೊಳ್ಳುವುದೇ ಕಷ್ಟದ ಸಂಗತಿ.......

                      ಹೀಗೆ ಹಲವು ಆಸೆಗಳ ನಡುವೆ ನಮ್ಮ ಜೀವನ ಸಾಗುತ್ತಿದೆ . ನಮ್ಮ ಆಸೆಗಳು ನಮ್ಮ ಜೀವನ ಏಳಿಗೆಗೆ ಕಾರಣವಾಗಬೇಕೇ ಹೊರತು ನಮ್ಮ , ಅವನತಿ ಗೆ ಕಾರಣವಾಗಬಾರದು ....  ನಮ್ಮನ್ನು ನಂಬಿಕೊಂಡಿರುವ ಅನೇಕ ಜೀವಗಳಿಗೆ ನಿರಾಸೆಯಾಗುವಂತಿರಬಾರದು ....

ಮರೆಯಾಗಲಿರುವ ಈ ಜೀವನದ ಆಸೆಗಳು ಮಿತಿಯಲ್ಲಿದ್ದರೆ  ಒಳಿತಲ್ಲವೇ......?????

Wednesday, 2 November 2011

ಮರೆಯಲಾಗದ ಆ ಜೀವ........


ಕೆಲವು ಸನ್ನಿವೇಶಗಳು, ಕೆಲವು ವ್ಯಕ್ತಿಗಳು ಕೆಲವರ  ಮನಸ್ಸಿನಲ್ಲಿ ಅಳಿಸಲಾಗದೆ ಉಳಿದು ಬಿಡುವಂತಹ ಅನೇಕ  ವಿಷಯಗಳನ್ನು ಎಲ್ರೂ ಕೆಳಿರ್ತಾರೆ ಜೊತೆಗೆ ತಮ್ಮ ಜೀವನದಲ್ಲಿಯೂ ಸಹ ಅನೇಕರಿಗೆ ಇಂತಹ ಅನೇಕ ವಿಷಯಗಳು ಅನುಭವಕ್ಕೆ ಬಂದಿರಬಹುದು, ನಮ್ಮ ಮನಸ್ಸಿಗೆ ತುಂಬಾ ಬೇಜಾರ್ ಆದಾಗ , ನೋವಾದಾಗ ಅಂತಹ ಸನ್ನಿವೇಶಗಳನ್ನ ನೆನೆಪಿಸಿಕೊಂಡರೆ ಸ್ವಲ್ಪ ನೆಮ್ಮದಿ ದೊರಕುವುದಂತೂ ಕಂಡಿತ..... ಇದೇ ರೀತಿ ನಮ್ಮ ನೋವು ನಲಿವುಗಳನ್ನ ಹಂಚಿಕೊಳ್ಳೋಕೆ ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವ ಆ ಜೀವ ನಿಜಕ್ಕೂ ಆದ್ಭುತ .....
ನಾವೂ ಸಹ ಇನ್ನೊಬ್ಬರ ಜೀವನದಲ್ಲಿ ಇಂತಹ ಸ್ಥಾನ ಗಳಿಸುವುದು ಬಹು ದೊಡ್ಡ ಮಾತೇನಲ್ಲ .... ನಮ್ಮ ಆಚಾರ ವಿಚಾರ ಗಳು , ನಮ್ಮ ಜೀವನ ಶೈಲಿ ಅವರ ಮೇಲೆ ತುಂಬಾ ಪ್ರಭಾವ ಬೀರುವಂತಿರಬೇಕು....

 ನನ್ನ ಜೀವನದಲ್ಲಿ ನಾ ಕಂಡ ಅಂತಹ ಒಬ್ಬ ಆದ್ಭುತ ವ್ಯಕ್ತಿಯ ಬಗ್ಗೆ ಈ ನನ್ನ ಮಾತು....
 ತಾಯಿ ತನ್ನ ಮಗುವಿಗೆ ಜನ್ಮ ನೀಡಿದ ಸಂಧರ್ಬದಲ್ಲಿ , ಆ ಪುಟ್ಟ ಕಂದನ ಅಳು ಆಕೆಯ ಮನದಲ್ಲಿ ಅದೆಷ್ಟು ಸಂತೋಷದ ಅಲೆಯನ್ನು ಹುಟ್ಟಿಸುತ್ತದೆಂದರೆ ಅದಕ್ಕೆ ಮಿತಿಯೇ ಇಲ್ಲ , ಬಂಧು ಬಳಗದವರ ಸಂತಸ ಹೇಳಕೂಡದು .... ಇಪ್ಪತ್ತು ವರ್ಷಗಳ ಹಿಂದೆ ನಡೆದ ಇಂತಹದ್ದೇ ಒಂದು ಸಂದರ್ಬವನ್ನು ಆಕೆ ದಿನದಲ್ಲಿ ಒಮ್ಮೆಯಾದರೂ ನೆನೆಸದೆ ಕಳೆದ ದಿನಗಳೇ ಇಲ್ಲ , ಆ ಜನ್ಮ ದಿನದಿಂದ ಆ ಜೀವದ ಕಡೆಯ ದಿನಗಳ ವರೆಗೂ ನಡೆದ ಗಟನೆಗಳು, ಪಟ್ಟ ಕಷ್ಟಗಳು, ಹಂಚಿಕೊಂಡ ಸಂತೋಷ ಇವೆಲ್ಲವನ್ನೂ ಮರೆಯುವುದು ಈ ಜನ್ಮದಲ್ಲಿ ಅಸಾದ್ಯ ...
ಆಕೆಯ ಐವತ್ತು ವರ್ಷಗಳ ಜೀವನದಲ್ಲಿ ನಾ ಕಂಡ ಕೇವಲ ಹತ್ತೊಂಬತ್ತು  ವರ್ಷಗಳು ನನ್ನ ಜೀವನದ ಮರೆಯಲಾಗದ ಮಹಾ ವರ್ಷಗಳು...
 ಆಕೆಯ ಬಗ್ಗೆ ಹೇಳುವುದಾದರೆ ವಿಷಯಗಳು ಅನೇಕ...ಪರರ ಸಂತೋಷಕ್ಕೆ ಕಾರಣರಾಗಿ,ನೆರೆಹೊರೆಯವರ ಕಷ್ಟಗಳಿಗೆ ಕಣ್ಣೀರಿಟ್ಟು ಸಹಕರಿಸಿ, ಪರರಿಗೆ ಸಹಾಯ ಮಾಡುವುದರಲ್ಲೇ ತನ್ನ ಜೀವನದ ಅತಿ ಹೆಚ್ಹಿನ ಕ್ಷಣಗಳನ್ನು ಕಳೆಯುತ್ತಿದ್ದ ಆ ಜೀವಕ್ಕೆ ನನ್ನ ಮೇಲಿನ ಪ್ರೀತಿ , ಮಮತೆ ಅಪಾರ. ಮುಂದಿನ ಜೀವನದ ಬಗ್ಗೆ ಅದೆಷ್ಟೋ ಕನಸುಗಳನ್ನು ಹೊಂದಿದ್ದ ನನ್ನ ಪ್ರೀತಿಯ ಆ ಜೀವ ತನ್ನ ಕನಸುಗಳ ಜೊತೆಯಲ್ಲೇ ಮರೆಯಾದ  ಆ ಸಂದರ್ಭ(14/08/2010) ನನ್ನ ಜೀವನದ ಮರೆಯಲಾಗದ ಬಹು ದೊಡ್ಡ ಕಹಿಘಟನೆ...
 ನನ್ನ ಜೀವನದ ಯಾವುದೇ ಸಂತೋಷದ ಸಂದರ್ಭದಲ್ಲಿ ನನಗಿಂತ ಮೊದಲು ಅತೀ ಹೆಚ್ಚು ಸಂತಸ ಪಡುತ್ತಿದ್ದ ನನ್ನ ಜೀವವೇ ಇಲ್ಲದ ಈ ನನ್ನ ಜೀವನ ನೀರಿಲ್ಲದ ಬರಡು ಭೂಮಿಯಂತೆ, ಜೀವನದಲ್ಲಿ ಕೆಲವು ದುಃಖದ ಸಂದರ್ಬದಲ್ಲಿ ಖುಷಿಯಿಂದ ಇರುವಂತೆ ನಟಿಸುವುದಕ್ಕಿಂತ,ನಮ್ಮ ಸಂತಸದ ಸಂಧರ್ಬ ಗಳನ್ನು ನಮ್ಮ ನೆಚ್ಚಿನವರೊಂದಿಗೆ ಹಂಚಿಕೊಳ್ಳಲಾಗದೇ ಇರುವಂತ ಸಂಧರ್ಬ ಅತ್ಯಂತ ಕಷ್ಟಕರ . ಇಂತಹ ಒಬ್ಬ ಆದ್ಭುತ ವ್ಯಕ್ತಿಯನ್ನು ನನ್ನ ಈ ಪುಟ್ಟ ಜೀವನದಿಂದ ಇಷ್ಟು ಬೇಗ
ಕಳೆದು ಕೊಂಡ ನತದೃಷ್ಟ  ನಾನು. ನನ್ನ ಪ್ರೀತಿಯ ಜೀವದ ನೆನೆಪಿನಲ್ಲೇ , ಅವರ ಮಾರ್ಗದರ್ಶನದಲ್ಲೇ,ಬೇರೆಯವರಿಂದ ಪ್ರತಿಯಾಗಿ ಏನನ್ನೂ ಬಯಸದೇ ಅವರ ಜೀವನ ಶೈಲಿಯಂತೆ ಪರರ ಸಂತೋಷಕ್ಕೆ ಕಾರಣನಾಗುತ್ತ ನನ್ನ ಜೀವನವನ್ನು ಕಳೆಯಬೇಕೆಂಬುದು ನನ್ನ

ಜೀವನದ ಅತೀ ದೊಡ್ಡ ಆಸೆ..........

Tuesday, 1 November 2011

ಮೊದಲ ಮಾತು

"ಮನಸ್ಸಿನ ಮಾತು"  ಕೇವಲ ನನ್ನ ಮನಸ್ಸಿನ ಮಾತಲ್ಲ , ನಾನು ಕೇಳಿದ , ಓದಿದ,ಜೊತೆಗೆ ನನ್ನ ಜೀವನದಲ್ಲಿ ನನ್ನ ಅನುಭವಕ್ಕೆ ಬಂದ  ಕೆಲವೇ ಕೆಲವು ವಿಷಯಗಳ ಹಂಚಿಕೆ .... ನಮ್ಮ ಜೀವನದ ಹಾದಿಯಲ್ಲಿ ಅದೆಷ್ಟೋ ವಿಷಯಗಳನ್ನು ನಾವು ಅನುಭವಿಸುತ್ತಾ , ತಿಳಿದುಕೊಳ್ಳುತ್ತಾ, ಹೋಗುತ್ತೇವೆ....ಅಂತಹ ಅದೆಷ್ಟೋ ವಿಷಯಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳುವದರಲ್ಲಿ ಅದೇನೋ ಉಲ್ಲಾಸ , ಸಂತೋಷ... ನಾವು ಹುಟ್ಟಿದಾಗಿನಿಂದ ಸಾಯುವವರೆಗೆ ನಮ್ಮ ಜೀವನ ಶೈಲಿ ವಿಬಿನ್ನ ಹಂತಗಳಲ್ಲಿ ವಿಭಿನ್ನ ರೀತಿಯಲ್ಲಿ ಬದಲಾಗುತ್ತಾ ಸಾಗುತ್ತದೆ , ಯಾರೂ ಸಹಾ ಒಂದೇ ತರನಾದ ಜೀವನ ಶೈಲಿಯನ್ನು ತುಂಬಾ ವರ್ಷಗಳ ಕಾಲ ಮುಂದುವರೆಸಿಕೊಂಡು ಹೋಗುವುದು ತುಂಬಾ ಕಷ್ಟಕರವಾದ ಸಂಗತಿ..... ನಮ್ಮ ಚಿಂತನೆಗಳು , ನಮ್ಮ ಅನುಭವಗಳು ನಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತಾ ಸಾಗುತ್ತದೆ ........ ಅನೇಕ ವ್ಯಕ್ತಿಗಳು ನಮ್ಮ ಜೀವನದಲ್ಲಿ ಪ್ರವೇಶಿಸುತ್ತಾರೆ, ಅನೇಕರನ್ನು  ನಮ್ಮ ಜೀವನದಿಂದ ಕಳೆದುಕೊಳ್ಳುತ್ತೇವೆ , ಇನ್ನೂ ಅನೇಕರು ಪ್ರಸ್ತುತ ನಮ್ಮ ಜೊತೆಗಿರುವಂತೆ ಕೊನೆಯವರೆಗೂ ಹೀಗೆ ಇರುತ್ತಾರೆ  , ನಮ್ಮ ಸಂಭಂದ ಶಾಶ್ವತ ಅನ್ನುವ ಆತ್ಮ ವಿಶ್ವಾಸದಿಂದ ನಮ್ಮ ಜೀವನ ಸಾಗುತ್ತಿದೆ ........ ಅದೆಷ್ಟೋ ಮರೆಯಲಾಗದ  ದುಃಖದ ವಿಷಯಗಳು , ಸಂತೋಷದ ಸಂಗತಿಗಳ ನಡುವೆ ನಮ್ಮ ಜೀವನದ ಪಯಣ .........  ಹೀಗೆ ನನ್ನ ಜೀವನದ  ಪ್ರತೀ ಹಂತದಲ್ಲೂ ನನ್ನ ಅನುಭವಕ್ಕೆ  ಬಂದ ಅದೆಷ್ಟೋ ಸಂಗತಿಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುವ ಒಂದು ಚಿಕ್ಕ ಪ್ರಯತ್ನ ಈ ನನ್ನ "ಮನಸ್ಸಿನ ಮಾತು"