Wednesday, 31 October 2012

ನಂಬಿಕೆ ಕಲ್ಪನೆ ಚಿಂತನೆಗಳು ನಮ್ಮಂತೆ ನಮ್ಮೊಳಗೇ.......                   ದೇವರು ಇರಬಹುದೇ ..?  ಅಥವಾ ಬರೀ  ಕಲ್ಪನೆಯೇ ..?  ದೆವ್ವ  ಭೂತ ಗಳು  ನಿಜವೇ ..? ನಂಬಿಕೆ  ಎಂದರೇನು ..?  ಮೂಢನಂಬಿಕೆಗಳೆಂದರೇನು..?? ಹೀಗೆ  ಹಲವಾರು ಚರ್ಚೆಗಳು , ವಾದ ಪ್ರತಿವಾದಗಳು  ಅಂತ್ಯ ಕಾಣದಂತೆ ದಿನೇ ದಿನೆ ಬೆಳೆಯುತ್ತಾ , ಯಾವುದೇ  ನಿರ್ಧಿಷ್ಟ  ಗುರಿಯನ್ನು ಹೊಂದಿರದೇ ಹೊಸ ಹೊಸ ದಿಕ್ಕಿನೆಡೆಗೆ ಸಾಗುತ್ತಿದೆ . ಮೊದ ಮೊದಲು ಇಂತಹ  ವಿಷಯಗಳು  ಅತ್ಯಂತ  ರೋಚಕವಾಗಿ  ಕಾಣಿಸುತ್ತಿತ್ತಾದರೂ  ಈಗ  ಇಂತಹ  ವಿಷಯಗಳಲ್ಲಿನ  ಚರ್ಚೆಗಳು , ವಾದ ಪ್ರತಿವಾದ ಗಳು  ಕೇವಲ  ಕಾಲಹರಣ  ಎನಿಸುವಂತಾಗಿದೆ. ಹಾಸ್ಯದ  ಸಂಗತಿಗಳೂ  ಎನಿಸುವಷ್ಟರ  ಮಟ್ಟಿಗೆ  ಬಂದು ನಿಂತಿದೆ. ಆಕಾಶದಲ್ಲಿ  ಒಂದು ಲಕ್ಷ  ನಕ್ಷತ್ರಗಳಿವೆ  ಎಂದರೆ   ಇರಬಹುದೇನೋ  ಎಂದು ಸುಮ್ಮನಾಗುವ  ಜನರು , ತಮ್ಮ ಎದುರಿನಲ್ಲೇ ಇರುವ ಗೋಡೆಯ  ಬಣ್ಣ  ಒಣಗಿದೆ ಎಂದರೆ  ಹೋಗಿ  ಸ್ಪರ್ಶಿಸಿ  ಸ್ಪಷ್ಟ ಪಡಿಸಿಕೊಳ್ಳುತ್ತಾರೆ. ಅಂದರೆ  ತಮ್ಮಿಂದ  ಸುಲಭವಾಗಿ  ಆಗುವಂತಹ  ಕೆಲಸಗಳಲ್ಲಿ  ತೋರುವ  ಆಸಕ್ತಿ , ಸ್ವಲ್ಪ  ಕಷ್ಟವೆನಿಸುವ  ತರ್ಕಗಳಲ್ಲಿ  , ಚರ್ಚೆಗಳಲ್ಲಿ , ಕೆಲವು  ಸಂಗತಿಗಳ  ಅಂತರಾಳ  ತಿಳಿಯುವಲ್ಲಿ  ತೋರುವುದಿಲ್ಲ . ಯಾವುದೋ ಒಂದು ಭಯ , ಕೆಲಸಕ್ಕೆ ಭಾರದ ಆಚರಣೆ ಗಳು , ಅರ್ಥವಿಲ್ಲದ  ಪದ್ಧತಿ ಗಳು, ಯಾರಿಂದಲೋ  ಕೇಳಿದ  ಕಥೆಗಳು  ಇವೇ  ಮೊದಲಾದ  ಮೂಢ(ನಂಬಿಕೆ)ಗಳು  ಹತ್ತು ಹಲವು  ಯೋಚನೆಗಳ  ಹಾದಿಯನ್ನೇ  ನಾಶಪಡಿಸುತ್ತಿವೆ.
                      ಶಿಕ್ಷಣ ವಂತರೂ , ಬುದ್ದಿ ಜೀವಿಗಳೆನಿಸಿಕೊಂಡವರೂ  ಸಹ  ಮೂಢನಂಬಿಕೆಗಳಿಗೆ  ಬಲಿಯಾಗುತ್ತಿರುವುದು  ಅತ್ಯಂತ  ವಿಷಾದನೀಯ ಸಂಗತಿ. ದೇವರು ,ದೆವ್ವ ಭೂತ ಗಳನ್ನು ಯಾರೊಬ್ಬರೂ  ಸಹ  ತಮ್ಮ  ಕಣ್ಣುಗಳಿಂದ  ನೋಡಿಲ್ಲ , ಅನುಭವಿಸಿಲ್ಲ  ಬದಲಾಗಿ   ಕೇವಲ  ಕಥೆಗಳು , ಚಿತ್ರಗಳು , ಕಾದಂಬರಿಗಳ  ಮೂಲಕ ವಷ್ಟೇ  ಅವುಗಳ  ಬಗ್ಗೆ ತಿಳಿದಿದ್ದಾರೆ. ಇವು ಕೇವಲ ಮಾನವ ಸೃಷ್ಟಿ. ದೇವರು  ದೆವ್ವ ಭೂತ ಗಳು  ಅಸ್ಥಿತ್ವದಲ್ಲಿ  ಇವೆಯೇ  ಇಲ್ಲವೇ  ಎನ್ನುವುದು  ಇಲ್ಲಿ  ವಿಷಯವಲ್ಲ. ಅದರ  ಬಗೆಗಿನ  ಚರ್ಚೆಗೆ  ಅರ್ಥವೇ ಇಲ್ಲ. ಇಂತಹ  ಚರ್ಚೆ  ಕೇವಲ  ಹಾಸ್ಯಕ್ಕೆ ದಾರಿಮಾಡಿಕೊಡುತ್ತವೆ. ಈಗಂತೂ  ಎಲ್ಲಿ ನೋಡಿದರೂ  ಮಠ  ಮಂದಿರ  , ಚರ್ಚು , ದೇವಸ್ಥಾನಗಳು ಬೀದಿ ಬೀದಿ ಗಳಲ್ಲಿ  ತಲೆ  ಎತ್ತುತ್ತಿವೆ.ವ್ಯಕ್ತಿ ಪೂಜೆ  ಅನಿಷ್ಟಪದ್ಧತಿ  ಹಾಗೆ  ಹೀಗೆ  ಎಂದು  ಏನೇನೋ  ಹೇಳುತ್ತಿದ್ದರೂ  ದಿನೇ ದಿನೇ  ಸನ್ಯಾಸಿ ಗಳು , ಮಠಾದಿಪತಿಗಳೂ, ದೇವಮಾನವರ  ಸಂಖ್ಯೆ  ಏನೂ  ಕಡಿಮೆ ಆದಂತೆ  ಕಾಣುತ್ತಿಲ್ಲ. ಕೇವಲ  ಮಾನವನಾಗಿದ್ದುಕೊಂಡೂ ಸಹ  ಒಳ್ಳೆಯ  ಕೆಲಸಗಳನ್ನು ಮಾಡಬಹುದಲ್ಲವೇ...? ಅನಾಥಾಶ್ರಮಗಳು , ವೃದ್ಧಾಶ್ರಮಗಳು , ವಿಕಲಚೇತನರ  ಪರಿಪಾಲನ  ಕೇಂದ್ರಗಳು , ಅನ್ನದಾಸೋಹ  ಕೇಂದ್ರಗಳು  ಎಲ್ಲ  ಮಂದಿರಗಳಿಗಿಂತ  ಕಡಿಮೆಯೇ..?  ಬೇಡದ  ಆಚರಣೆಗಳು , ದೇವರು  ಧರ್ಮದ  ಹೆಸರಿನಲ್ಲಿ  ಹಣಪೋಲು  ಮಾಡುವುದಕ್ಕಿಂತ , ಹಸಿದವರಿಗೆ  ಆಹಾರವಾಗಿ , ನಿರಾಶ್ರಿತರಿಗೆ  ನೆಲೆಯಾಗಿ , ಕಷ್ಟದಲ್ಲಿರುವವರಿಗೆ  ಸಹಾಯಕ್ಕಾಗಿ  ಅದೇ ಹಣವನ್ನು ಉಪಯೋಗಿಸುವುದು  ಒಳಿತಲ್ಲವೇ ..??
            ಪ್ರಾಣಿಬಲಿ ಕೊಡುವುದು , ನರಬಲಿ ಕೊಡುವುದು , ಮಾಟ ಮಂತ್ರ ಗಳಷ್ಟನ್ನೇ ಮೂಢನಂಬಿಕೆಗಳು ಎನ್ನುವುದಾದರೆ  ಯಾವುದೋ  ಅರಮನೆಯಂತಿರುವ  ಕಟ್ಟಡದ  ಒಳಗಿನ ಕೇವಲ ಕಲ್ಲಿನ ವಿಗ್ರಹ ವನ್ನು  ನೋಡುವ ಆತುರದಲ್ಲಿ  ಜನಸಂದಣಿ  ಉಂಟಾಗಿ  ಕಾಲ್ತುಳಿತಕ್ಕೆ  ಬಿದ್ದು  ಸಾಯುವುದು  ಮೂಢನಂಬಿಕೆ ಯಲ್ಲವೇ..?ಚಳಿಯಂತಹ  ಚಳಿಯಲ್ಲೂ  ಸಹ  ಮುಂಜಾನೆ  ತಣ್ಣಗಿನ  ನೀರಿನಲ್ಲಿ  ಮುಳುಗಿ  ಏಳುವುದು, ಯಾವುದೋ ಕಟ್ಟಡದ  ಸುತ್ತಲೂ  ಹೊರಳಾಡುವದು, ಆರೋಗ್ಯಹಾಳುಮಾಡಿಕೊಳ್ಳುವುದು ಅದೆಂತಹ ನಂಬಿಕೆ..? ದಿನ ನಿತ್ಯದ ಜೀವನಕ್ಕೆ  ಕಷ್ಟವಿದ್ದರೂ  ಸಹ  ಮಠ  ಮಂದಿರ  ಮಸೀದಿ ಚರ್ಚ ಗಳ  ಹುಂಡಿಯಲ್ಲಿ  ತನ್ನ ಕೈ ಮೀರಿ ರಾಶಿ ರಾಶಿ  ಹಣ ಸುರಿಯುವುದು ಮೂಢನಂಬಿಕೆ ಯಲ್ಲದೆ  ಮತ್ತೇನು...?   ಮಾನವರ  ದೇಹದಲ್ಲಿ  ದೇವರು ದೆವ್ವ ಭೂತಗಳು  ಬಂದು ಸೇರುವುದು, ದೇವರನ್ನು ಬಂದಿರುವವರನ್ನು  ಪೂಜಿಸುವುದು, ಅವರು ಹೇಳಿದಂತೆ  ಆಚರಣೆಗಳು, ಅವರು ಹೇಳಿದ ವಿಷಯಗಳನ್ನೇ ಅಂತಿಮ ಎಂದು ಭಾವಿಸುವುದು, ಅವರು ನೀಡುವ  ಪೊಳ್ಳು ಭರವಸೆಗಳು, ಪರಿಹಾರಗಳನ್ನು  ಆಲಿಸಿ  ಭಯ ಭಕ್ತಿ ತೋರುವುದು , ಹಾಗೆಯೇ  ದೆವ್ವ ಭೂತಗಳು  ಸೇರಿಕೊಂಡಿರುವ  ದೇಹವನ್ನು  ಹಿಂಸಿಸುವುದು , ಹೊಡೆದು  ಬಡಿದು  ಅವನ್ನು  ದೇಹದಿಂದ ಉಚ್ಚಾಟನೆ  ಮಾಡುವಂತೆ ನಟಿಸುವುದು  ಇಂತಹ  ಸಂಗತಿಗಳು  ಎಷ್ಟೊಂದು ಹಾಸ್ಯಸ್ಪದ ವಲ್ಲವೇ...?? ಇವುಗಳನ್ನೂ  ನಂಬಿಕೆಗಳೆನ್ನಬಹುದೇ..?  ಪರೀಕ್ಷೆಯ  ಹಿಂದಿನ ದಿನ  ವಿದ್ಯಾರ್ಥಿಗಳು ದೇವಸ್ಥಾನ  ಮಂದಿರ ಗಳಿಗೆ  ಬೇಟಿ ನೀಡುವುದು , ಪೂಜೆ ಪುನಸ್ಕಾರಗಳನ್ನು  ನಡೆಸುವುದು. ಪರೀಕ್ಷೆ ಮುಗಿದನಂತರದಲ್ಲಿ  ಮಂದಿರಗಳಿಗೆ  ಬೇಟಿ ನೀಡಿ  ಪೂಜೆ ಮಾಡಿಸುವುದು , ಪ್ರಾಣಿಬಲಿ ನೀಡುವುದು, ಹೀಗೆ ಹತ್ತು ಹಲವು ರೀತಿಯಲ್ಲಿ  ತನ್ನ ಹರಕೆಗಳನ್ನು ತೀರಿಸುವುದು ನಂಬಿಕೆಗಳೇ ..?ಭೋಜನಕ್ಕಾಗಿ  ರಾತ್ರಿ  ಹನ್ನೆರಡರ  ವರೆಗೂ  ಕಾದಿದ್ದು ತನ್ನ  ವೃತ ಮುಗಿಸಿ  ಭೋಜನ  ( ಸಸ್ಯ / ಮಾಂಸ )  ಮುಗಿಸಿ ಮಲಗುವುದು, ಆಚರಣೆ  ಭಯ ಭಕ್ತಿ  ಹೆಸರಿನಲ್ಲಿ  ಉಪವಾಸ ನಡೆಸುವುದು  ನಂಬಿಕೆಗಳೇ..?  ಪೂಜೆ  ಹಬ್ಬ ಹರಿದಿನಗಳ  ಆಚರಣೆಯ  ಹೆಸರಿನಲ್ಲಿ  ಮರ ಗಿಡ  ಗಳನ್ನು  ಕಡಿಯುವುದು , ಅವುಗಳನ್ನು  ಅಲಂಕಾರಕ್ಕಾಗಿ  ಬಳಸುವುದು , ಹಣವನ್ನು  ಸಂಗ್ರಹಿಸಿ  ದುಂದುವೆಚ್ಚ ಮಾಡುವುದು, ವಾಯುಮಾಲಿನ್ಯ, ಶಬ್ದಮಾಲಿನ್ಯ  ಮಾಡುವುದು , ನೀರನ್ನು ಕಲುಷಿತ ಗೊಳಿಸುವುದು , ಬೀದಿ ಬೀದಿಗಳಲ್ಲಿ ದೇವರ ಹೆಸರಿನ ವಿಗ್ರಹಗಳನ್ನು ಇರಿಸಿ  ಅದರ  ನಾಮಕಾವಸ್ತೆಯಲ್ಲಿ  ಕುಣಿದು ಕುಪ್ಪಳಿಸಿ  ಹಣದ  ದುರುಪಯೋಗ  ನಡೆಸುವುದು  ದೇವರ ಹೆಸರಿನಲ್ಲಿ ಪ್ರಕೃತಿಗೆ  ಮಾಡುವ  ದ್ರೋಹ  ಎನಿಸುವುದಿಲ್ಲವೇ..?  ಇವು ನಂಬಿಕೆಗಳೇ  ಅಥವಾ  ಮೂಢನಂಬಿಕೆಗಳೇ  ಅಥವಾ  ಒಂದೇ  ನಾಣ್ಯದ  ಎರಡು ಮುಖಗಳಂತೆ  ಒಂದೇ ಅರ್ಥದ  ಎರಡು ಪದಗಳೇ...??
                ಇತ್ತೀಚಿನ  ದಿನಗಳಲ್ಲಿ  ನಮ್ಮ ಸುದ್ದಿ ಮಾದ್ಯಮ ಗಳೂ  ಸಹ  ಮೂಢನಂಬಿಕೆಗಳಿಗೆ  ಮನೆ ಮಾಡಿ ಕೊಡುತ್ತಿವೆ. ಮುಂಜಾನೆಯಿಂದ  ರಾತ್ರಿಯವರೆಗೆ  ಮೂಢನಂಬಿಕೆಯನ್ನು ಪ್ರಚೋದಿಸುವ ಅದೆಷ್ಟು  ಕಾರ್ಯಕ್ರಮಗಳೋ.. ಒಬ್ಬ ಕಪಟ  ಸನ್ಯಾಸಿಯ  ಬಗೆಗೆ  ಅವನ  ಪ್ರತಿಯೊಂದೂ  ತಪ್ಪುಗಳನ್ನು ಅವ್ಯವಹಾರಗಳನ್ನು  ಸ್ವಲ್ಪವೂ  ಬಿಡದೆ  ಪ್ರಸಾರಮಾಡುತ್ತಿರುವಾಗಲೇ , ಆತನ  ಆಶ್ರಮದ  ಬಗ್ಗೆ , ಅಲ್ಲಿ ನಡೆಯುವ  ಆಚರಣೆಗಳು , ಪೂಜಾ ಕಾರ್ಯಕ್ರಮಗಳ  ಬಗ್ಗೆ  ಜನರನ್ನು  ಸೆಳೆಯುವಂತ  ಜಾಹಿರಾತುಗಳನ್ನೂ  ಪ್ರಸಾರಮಾಡುತ್ತಿರುತ್ತವೆ. ಮೂಢನಂಬಿಕೆಯಿಂದ  ಜನರನ್ನು  ದೂರವಿಡುವಂತಹ  ಒಂದೆರಡು  ಕಾರ್ಯಕ್ರಮಗಳನ್ನು  ಪ್ರಸಾರಮಾಡಿದರೆ, ಜನರನ್ನು ಮೂಢನಂಬಿಕೆ ಯತ್ತ  ಸೆಳೆಯಲು  ಹತ್ತು ಹಲವು  ಕಾರ್ಯಕ್ರಮಗಳು  ಪ್ರಸಾರವಾಗುತ್ತಿರುತ್ತವೆ.  ಯಾವುದೋ  ಒಬ್ಬ ವ್ಯಕ್ಥಿಯನ್ನು  ನಾಮಕಾವಸ್ತೆಗೆ   ಕೂರಿಸಿಕೊಂಡು  ಆತನ  ಜೊತೆಯಲ್ಲಿ  ಮೂರೂ ನಾಲ್ಕು ಸ್ವಾಮೀಜಿಗಳು, ಸನ್ಯಾಸಿಗಳು, ದೇವಮಾನವರು, ಜ್ಯೋತಿಷಿಗಳೆನಿಸಿಕೊ೦ಡವರನ್ನು  ಕೂರಿಸಿಕೊಂಡು ಚರ್ಚೆಗಳನ್ನು  ನಡೆಸಿ ಕೊನೆಗೆ  ವಿಜ್ಞಾನವೇ  ಸುಳ್ಳು  (ಮೂಢ)ನಂಬಿಕೆ ಗಳೇ  ಸತ್ಯ  ಎನ್ನುವಷ್ಟರ  ಮಟ್ಟಿಗೆ  ನಮ್ಮ ಮಾಧ್ಯಮಗಳು ಮುಂದುವರಿದಿವೆ. ಜನರಲ್ಲಿ  ಜಾಗೃತಿಯನ್ನು  ಮೂಡಿಸಬೇಕಾಗಿರುವಂತಹ  ಮಾಧ್ಯಮಗಳು  ಮೂಢನಂಬಿಕೆಯ  ಬೀಜ ಬಿತ್ತುತ್ತಿರುವುದು  ವಿಷಾದನೀಯ. ಇಂತಹ ವಿಷಯಗಳಲ್ಲಿ ಮಾಧ್ಯಮಗಳು  ಆದಷ್ಟು ಬೇಗ ಎಚ್ಚೆತ್ತು ಕೊಳ್ಳುವುದು  ಅನಿವಾರ್ಯ.
                  ಎಲ್ಲೋ  ಹುಡುಕಿದೆ  ಇಲ್ಲದ  ದೇವರ  ಕಲ್ಲು ಮುಳ್ಳಿನ  ಗುಡಿಯೊಳಗೆ  , ಇಲ್ಲೇ  ಇರುವ ಪ್ರೀತಿ ಸ್ನೇಹಗಳ  ಗುರುತಿಸದಾದೆನು  ನಮ್ಮೊಳಗೇ  ಎನ್ನುವ ಹಾಡು ಇಲ್ಲಿ  ನೆನಪಾಗುತ್ತಿದೆ. ದೇವರು  ಇರಲಿ  ಇಲ್ಲದಿರಲಿ  ಒಟ್ಟಿನಲ್ಲಿ  ಮೂಢನಂಬಿಕೆಗಳು ನಾಶವಾಗಬೇಕಿದೆ . ನಂಬಿಕೆ  ಎಂಬ  ಹೆಸರಿನಲ್ಲಿ  ನಡೆಯುತ್ತಿರುವ  ಅವ್ಯವಹಾರಗಳು, ಶೋಷಣೆ, ಹಣದ ದುರುಪಯೋಗ , ದುಂದುವೆಚ್ಚಗಳು  ನಿಲ್ಲ ಬೇಕಿದೆ.  ಇದರಿಂದ  ನಮ್ಮ ಸುತ್ತಲೂ ಉಂಟಾಗುತ್ತಿರುವ  ಕೆಟ್ಟ ಪರಿಣಾಮಗಳು  ಕೊನೆಯಾಗಬೇಕಿದೆ.  ನಮ್ಮ ನಂಬಿಕೆ  ಮೂಢನಂಬಿಕೆ ಗಳಿಂದ  ಒಳ್ಳೆಯ  ಕೆಲಸಗಳು  ನಡೆಯದಿದ್ದರೂ ,  ಯಾವುದೇ  ಕೇಡುಕಾಗದಿದ್ದರೆ  ಒಳಿತು. ವಿಧ್ಯಾರ್ಥಿಗಳು , ಬುದ್ದಿವಂತ  ಜೀವಿ ಗಳೆನಿಸಿಕೊಂಡವರು  ಇಂತಹ  ವಿಷಯ ಗಳ  ಬಗೆಗೆ ಜಾಗೃತಿ   ಮೂಡಿಸುವ  ಹಾಗು ತಾವೂ  ಎಚ್ಚೆತ್ತು ಕೊಳ್ಳುವ  ಕೆಲಸಗಳು  ಆಗಬೇಕಿದೆ.

Sunday, 30 September 2012

ಮಧ್ಯಂತರ ... ಹಲವು ಮನಸ್ಸುಗಳ ನಡುವೆ.....
  " ಹಲವು ಗೆಳೆಯರು ಗುಂಪು ಸೇರಿಕೊಂಡು ಯಾವುದೋ ಪ್ರವಾಸದ ಬಗ್ಗೆ ಮಾತನಾಡುತ್ತಿದ್ದಾರೆ , ಆದರೆ  ಅದೇ ಗುಂಪಿನ ಮತ್ತೊಬ್ಬ ಸದಸ್ಯ ಕಾರಣಾಂತರದಿಂದ  ಈ ಚರ್ಚೆ ಯಲ್ಲಿ  ಭಾಗವಹಿಸಿಲ್ಲ . ಆತನಿಗೆ  ಯಾವುದೋ ಕಾರಣವಿರಬಹುದು ಅದು ಇಲ್ಲಿ ಮುಖ್ಯವಲ್ಲ . ಅವನು ಈ ಚರ್ಚೆಯಲ್ಲಿ ಭಾಗವಹಿಸಲಿಲ್ಲ  ಎನ್ನುವುದಷ್ಟೇ ಮುಖ್ಯ . ಅವನ  ಅನುಪಸ್ಥಿತಿಯಲ್ಲೇ  ಚರ್ಚೆ ನಡೆಯಬಹುದು  ಹಾಗೂ ಸಾಮೂಹಿಕ ತೀರ್ಮಾನ  ತಗೆದುಕೊಳ್ಳಬಹುದು.  ಆದರೆ  ಇಲ್ಲಿ  ತೀರ್ಮಾನಗಳು ತೆಗೆದುಕೊಂಡ  ನಂತರ  ಆ  ಅನುಪಸ್ಥಿತಿಯ ಗೆಳೆಯನ ಬಗೆಗೆ  ಹತ್ತು ಹಲವು ಚರ್ಚೆಗಳೂ ಸಹ ನಡೆಯುತ್ತದೆ . ಅವನ  ಒಳ್ಳೆಯ ಕೆಲಸಗಳಿಗಿಂತ ಹೆಚ್ಚಾಗಿ  ಅವನು  ಮಾಡಿದ , ಮಾಡುತ್ತಿರುವ  ಅನೇಕ  ತಪ್ಪುಗಳು  ಅಂದಿನ  ಚರ್ಚೆಯಲ್ಲಿ  ತಮ್ಮ ಅಸ್ತಿತ್ವ ಪಡೆದು ಕೊಳ್ಳುತ್ತವೆ... "
                      ಹೀಗೆ ನಾನು ಇಲ್ಲಿ ಹೇಳಲು ಹೊರಟಿರುವ  ವಿಷಯ ಇಂತಹ  ಹಲವು  ಸಮಯ  ಸಂದರ್ಭ ಗಳಿಗೆ  ಹೋಲಿಕೆಯಾಗುವಂತಹ ನಮ್ಮ ಸುತ್ತ ಮುತ್ತ  , ನಮ್ಮ  ಸನಿಹದಲ್ಲಿ  ನಮ್ಮ ನಮ್ಮಲ್ಲಿಯೇ  ನಡೆಯುತ್ತಿರಬಹುದಾದಂತಹದು . ಇಂತಹ ವಿಷಯಗಳು  ಹಲವು ಜನರ  ಅನುಭವಗಳಲ್ಲಿ  ಮನೆ ಮಾಡಿರುವುದು  ಅಷ್ಟೇ ಸತ್ಯ . ಪರರ  ಚಿಂತನೆ ನಮಗೆಕಯ್ಯಾ , ನಮ್ಮ ನಮ್ಮ ಚಿಂತನೆಗಳು ನಮಗೆ ಸಾಕಲ್ಲವೇ ..??  ಎನ್ನುವುದಕ್ಕಿಂತ  " ನಮ್ಮ ಚಿಂತೆಗಳು ನಮಗೇಕೆ  ಪರರ  ಚಿಂತನೆ ಯಷ್ಟೇ  ನಮಗೆ  ಮುಖ್ಯ ವಲ್ಲವೇ ..??  "   ಎನ್ನುವಂತಾಗಿದೆ .  ಇಲ್ಲಿ ತಮ್ಮ ತಮ್ಮ  ತಪ್ಪುಗಳನ್ನು ಬದಿಗಿಡುವ  ಆತುರದಲ್ಲಿ  ಪರರ  ತಪ್ಪುಗಳನ್ನೂ , ಅವರ  ಗುಣ ನಡತೆಯನ್ನು  ಎತ್ತಿ ಹಿಡಿಯುವುದು ಸರ್ವೆ ಸಾಮಾನ್ಯ. ಬೇರೆಯವರ ಬಗೆಗೆ  ಮಾತನಾಡುವುದರಲ್ಲಿ ಎರಡು ಬಗೆಗಳಿವೆ . ಒಂದು ವ್ಯಕ್ತಿಯ ಬಗ್ಗೆ  ಅವನ ಅನುಪಸ್ಥಿತಿಯಲ್ಲಿ  ಒಳ್ಳೆಯ ಮಾತುಗಳನ್ನಾಡುವುದು .ಅವನ  ಕೆಲಸಗಳನ್ನು ಗೌರವಿಸುವುದು  ಇತ್ಯಾದಿ. ಮತ್ತೊಂದು ಬಗೆ ಇದೆ ,ಈ ಮೇಲೆ ಹೇಳಿದಂತೆ  ಅನುಪಸ್ಥಿತಿಯಲ್ಲಿರುವ  ವ್ಯಕ್ತಿಯ ಬಗೆಗೆ ಬೇಡದಮಾತುಗಳನ್ನಾಡುವುದು. ಯಾವತ್ತೋ , ಎಷ್ಟೋ ದಿನಗಳ ಹಿಂದೆ  ಅವನ ಗುಣ ನಡತೆಯಿಂದ  ನಮಗಾದ  ತೊಂದರೆಯನ್ನು ಪ್ರಮುಖ ಕಾರಣವಾಗಿಟ್ಟುಕೊಂಡು  ದುರುದ್ದೇಶದಿಂದ  ಅವನ  ವ್ಯಕ್ತಿತ್ವವನ್ನೇ   ಸಣ್ಣದಾಗಿಸಿ, ಅವನ  ಸಣ್ಣ ಸಣ್ಣ ತಪ್ಪುಗಳನ್ನು ಎತ್ತಿಹಿಡಿಯುವುದರ  ಜೊತೆಗೆ  ಅವನದಲ್ಲದ  ಆರೋಪಗಳನ್ನು ಅವನ ಮೇಲೆ  ಹೊರಿಸುವುದು  ಇತ್ಯಾದಿ..ಹೀಗೆ  ನನ್ನ ಅನುಭವದಲ್ಲಿಯೂ ಇಂತಹ  ಹಲವು ಘಟನೆಗಳು ನಡೆದಿವೆ. ನಾನೂ ಸಹ  ನನ್ನ ಗೆಳೆಯರೊಂದಿಗೆ ಸೇರಿಕೊಂಡು ನಮ್ಮ ಮತ್ತಾವುದೋ  ಗೆಳೆಯನ ಬಗೆಗೆ ಇಂತಹ  ಬೇಡದ  ಹತ್ತು ಹಲವು ಮಾತುಗಳನ್ನಾದಿದ್ದೇವೆ . ಆಗ  ನನ್ನ ಅನುಭವಕ್ಕೆ ಬಂದ  ಒಂದು ವಿಷಯ ವೆಂದರೆ  ನಮ್ಮ ಸುತ್ತ ಮುತ್ತಲೂ  ನಡೆಯುತ್ತಿರುವ   ಇಂತಹ ಸಾಮಾನ್ಯ ಜೀವನ, ಗುಂಪು  ಗೆಳೆತನ  , ಪ್ರೀತಿ ಸ್ನೇಹ  ಸಂಬಂಧಗಳ   ಆಂತರಿಕ  ಸತ್ಯ.
                        ನಮ್ಮದೂ  ಒಂದು  ಗೆಳೆಯರ  ಗುಂಪಿದೆ . ನನ್ನ  ಗೆಳೆಯರ ಗುಂಪಿನೊಂದಿಗೆ  ಕಾಲ ಕಳೆಯುವುದೆಂದರೆ  ಅದೊಂದು ರೀತಿಯ ಸ್ವರ್ಗ .  ನಮ್ಮ  ಈ  ಪುಟ್ಟ ಸಮೂಹದಲ್ಲಿ  ನಡೆದ  ಕೆಲವು  ಘಟನೆಗಳು , ಅನುಭವಗಳೇ  ಈ  ಪುಟ್ಟ ಬರಹಕ್ಕೆ ಕಾರಣ.  ಕೆಲವು ದಿನಗಳ ಹಿಂದೆ  ನಮ್ಮ ಗೆಳೆಯನೊಬ್ಬನ  ಸಣ್ಣ  ತಪ್ಪು ಉಳಿದ ಎಲ್ಲ ಗೆಳೆಯರ  ಬೇಸರಕ್ಕೆ  ಕಾರಣವಾಗಿತ್ತು.  ಅವನ ತಪ್ಪು ಪ್ರತಿಯೊಬ್ಬರಿಗೂ ತಿಳಿದಿತ್ತು . ನನಗೂ ಕೂಡ.  ಆದರೆ  ಯಾರೊಬ್ಬರೂ ಸಹ  ಅವನ ಬಳಿ  ನೇರವಾಗಿ  ಮಾತನಾಡಲಿಲ್ಲ . ಅವನಿಗೆ ಅವನ  ತಪ್ಪಿನ  ಅರಿವನ್ನು ಮಾಡಿಕೊಡಲಿಲ್ಲ. ಅವನು  ಇಲ್ಲದ  ಸಂದರ್ಭ ದಲ್ಲಿ  ಉಳಿದ ನಾವೆಲ್ಲ ಸ್ನೇಹಿತರು  ಒಂದೆಡೆ  ಸೇರಿದಾಗ  ಈ  ವಿಷಯದ ಬಗ್ಗೆ  ಮಾತನಾಡಲು  ಪ್ರಾರಂಬಿಸಿ  ಹೀಗೆ  ಅವನ ಹತ್ತು ಹಲವು  ತಪ್ಪುಗಳು , ಎಷ್ಟೋ ಹಳೆಯ ವಿಷಯಗಳು  ಚರ್ಚೆಗೆ ಗ್ರಾಸವಾದವು.  ನಾನೂ ಸಹ ಅವನ  ಕೆಲವು ತಪ್ಪುಗಳನ್ನು  ಎತ್ತಿಹಿಡಿದಿದ್ದೆ. ಅವನ  ತುಂಬಾ ಆಪ್ತ ಗೆಳೆಯರೆನಿಸಿಕೊಂಡವರೂ  ಸಹ  ಅವನ ಬಗೆಗೆ  ಮಾತನಾಡುತ್ತಿದ್ದದನ್ನು ನೆನೆಸಿಕೊಂಡಾಗ  ನನ್ನ  ಪುಟ್ಟ ಮನಸ್ಸಿನಲ್ಲಿ ಮೂಡಿದ  ಪ್ರಶ್ನೆ  - " ನಾನೂ ಸಹ  ಈ ಎಲ್ಲ  ಗೆಳೆಯರಿಂದ  ಎಷ್ಟು ಭಾರಿ  ಇದೇ ರೀತಿ ಚರ್ಚೆಗೆ ಕೇಂದ್ರ ಬಿಂದುವಾಗಿರಬಹುದು . ನಮ್ಮ ನಡುವೆ ಎಷ್ಟೊಂದು ಹೊಂದಾಣಿಕೆ  , ಪರಸ್ಪರ ಸಹಾಯ ಮನೋಭಾವ , ಸ್ನೇಹ  ಪ್ರೀತಿ  ಇದ್ದರೂ  ಸಹ  ಇದು  ಕೇವಲ ಮೇಲುನೋಟಕ್ಕಷ್ಟೇ  ಸೀಮಿತ ವಾಗಿದೆಯಾ ...??? "
  ನಾವು  ಪರರ ಬಗೆಗೆ ಹೇಗೆ  ಮಾತನಾಡುತ್ತೀವೋ ಹಾಗೆ ಬೇರೆಯವರೂ  ಸಹ ನಮ್ಮ ಬಗೆಗೆ  ಮಾತನಾಡುತ್ತಿರುತ್ತಾರೆ  ಎನ್ನುವ  ಎಚ್ಚರಿಕೆಯ  ಘಂಟೆಯ  ಸದ್ದು  ನಮಗೆ  ಆಗಾಗ  ಕೇಳಿಸುತ್ತಿರಬೇಕು . ಬೇರೆಯವರ ಬಗೆಗೆ ಕೇವಲವಾಗಿ ಮಾತನಾಡುವುದು , ಅವರು ಹಾಗೆ  ಇವರು ಹೀಗೆ  ಅವನು ಸರಿ ಇಲ್ಲ  ಅವಳ ಬುದ್ದಿ  ಕೆಟ್ಟದು  ಹೀಗೆ  ಎಂದು ಯಾರಾದರೂ ನಿಮ್ಮ ಬಳಿ  ಮಾತನಾಡುತ್ತಿದ್ದರೆ , ದೂರುತ್ತಿದ್ದರೆ  ನೀವು  ಅವರ  ಮಾತುಗಳನ್ನು  ಹೇಗೆ  ನಂಬುತ್ತೀರಿ ..???  ನಿಮ್ಮ ಬಗ್ಗೆಯೂ  ಸಹ  ಅದೇ ವ್ಯಕ್ತಿ  ಅವರ ಬಳಿ ಹೀಗೆ ಮಾತನಾಡಬಹುದಲ್ಲವೇ....???    ನಮ್ಮ  ಬಳಿ  ಯಾರಾದರೂ ಮೂರನೆಯ ವ್ಯಕ್ತಿಯ ಬಗೆಗೆ  ಒಳ್ಳೆಯ ಮಾತುಗಳನ್ನಾಡಿದರೆ  ಅದನ್ನು ಪ್ರೀತಿಯಿಂದ  ಸ್ವಾಗತಿಸೋಣ.  ಅದೇ  ಪರ  ವ್ಯಕ್ತಿಯ ಬಗೆಗೆ  ಇಲ್ಲ ಸಲ್ಲದ  ಮಾತುಗಳು, ಅವನ  ತಪ್ಪುಗಳು , ಗುಣ ನಡತೆ ,ಆಚಾರ ವಿಚಾರ ಗಳ  ಆರೋಪ  ಮಾಡುವುದನ್ನು  ಖಂಡಿಸುವುದು  ಉತ್ತಮ . ಒಬ್ಬ ವ್ಯಕ್ತಿಯ  ಅನುಪಸ್ಥಿತಿಯಲ್ಲಿ  ಅವನ  ತಪ್ಪುಗಳ , ನಡತೆಯ ಬಗ್ಗೆ  ಮಾತನಾಡುವುದಕ್ಕಿಂತ , ಆಪಾದನೆ  ಮಾಡುವುದಕ್ಕಿಂತ  ಅವನ ಉಪಸ್ಥಿತಿಯಲ್ಲೇ  ಮನಸ್ಸಿಗೆ  ನಾಟುವಂತಹ  , ಅವನಿಗೆ ಇಷ್ಟ  ಆಗುವ  ರೀತಿಯಲ್ಲಿ  ಮಾತನಾಡಿ  ತಪ್ಪುಗಳನ್ನು ತಿದ್ದುವುದು  ಉಪಯುಕ್ತ ವಾದದ್ದು  ಎನ್ನುವುದು ನನ್ನ ಅಭಿಪ್ರಾಯ.
                                 ನಮ್ಮಂತೆಯೇ  ಎಲ್ಲರು , ನಾವೆಲ್ಲರೂ ಒಂದೇ  ಎಂಬ ಭಾವನೆಯೊಂದಿಗೆ , ಬೇರೆಯವರ  ಬಗೆಗೆ  ಅವಹೇಳನಕಾರಿ  ಮಾತುಗಳನ್ನಾಡದೇ , ಕೇವಲ  ತಪ್ಪುಗಳನ್ನು  ಹುಡುಕುವುದಷ್ಟೇ  ನಮ್ಮ  ವೃತ್ತಿ ಯಾಗಿರಿಸಿಕೊಳ್ಳದೆ ,  ನಡೆದು ಹೋದ ಹಾಗೂ ನಡೆಯುತ್ತಿರುವ  ತಪ್ಪುಗಳಿಗೆ  ತಕ್ಕ  ಪರಿಹಾರಗಳನ್ನು  ಕಂಡುಕೊಳ್ಳುತ್ತಾ , ನಮ್ಮಿಂದ  ಯಾರಿಗೂ  ನೋವಾಗದಂತೆ  ನಮ್ಮ  ಕೈಲಾಗುವಷ್ಟು  ಒಳ್ಳೆಯ ಕೆಲಸಗಳನ್ನೂ  ಮಾಡುತ್ತಾ   ಈ ಬದುಕು  ಎನ್ನುವ  ಜಟಕಾ ಬಂಡಿಯನ್ನು ನಡೆಸುತ್ತಿದ್ದರೆ  ಎಷ್ಟು  ಹಿತ ಎನಿಸುವುದಿಲ್ಲವೇ .....???

Tuesday, 24 April 2012

ಆತ್ಮೀಯ ಗೆಳೆತನದ ನಿರೀಕ್ಷೆಯಲ್ಲಿ ..............


ತುಂಬಾ ಬೋರ್  ಅದಾಗ ಏನಾದರು ಬರೀಬೇಕು ಅನ್ಸುತ್ತೆ , ಏನೇನೋ  ವಿಷಯಗಳು ನೆನಪಿಗೆ ಬರುತ್ತೆ . ಹೀಗೆ  ಮನದಲ್ಲಿ ಮೂಡಿದ  ಭಾವನೆಗಳ ಬೆನ್ನು ಹಿಡಿದು ಹೊರಟರೆ ಒಂದರ ಹಿಂದೆ ಒಂದರಂತೆ ಅದರ ಕೊಂಡಿ ಬೆಳೆದು ದೊಡ್ಡ ಸರಪಳಿಯೇ ಆಗುತ್ತದೆ . ಆದರೆ  ಈ  ಆಲಸ್ಯ ಇದಿಯಲ್ಲ !!! ಇದು  ಈ ಸರಪಳಿಯನ್ನು ಬೆಳೆಯೋದಕ್ಕೇ ಬಿಡ್ತಾ ಇಲ್ಲ ... ತುಂಬಾ ಸಲ ಸುಮ್ನೆ ಕೂತ್ಕೊಂಡಾಗೆಲ್ಲ  ಮನಸಲ್ಲಿ ತುಂಬಾ ಚಿಂತನೆಗಳು ಮೂಡುತ್ತೆ  ಆದರೆ  ಅದನ್ನು ಒಂದು ಕಡೆ ದಾಖಲಿಸೋಣ ಅಂದ್ರೆ ಈ ದರಿದ್ರ ಸೋಮಾರಿತನ ಇದಿಯಲ್ಲ  ಇದು ನನ್ನ ಲೇಖನಿಗೆ ಅವಕಾಶನೇ ಕೊಡ್ತಾ ಇಲ್ಲ . ಆದ್ರೂ ಇವತ್ತು ತುಂಬಾ ಕಷ್ಟ ಪಟ್ಟು ನನ್ನ ಲೇಖನಿನ  ಹೊರಗೆ ತೆಗೆದು ಪೇಪರ್  ಮೇಲೆ ಇಟ್ಟಿದೀನಿ .ನೋಡೋಣ ಎಲ್ಲಿವರೆಗೆ ಇದು ಆಲಸ್ಯದ ಜೊತೆಗೆ ಹೋರಾಡುತ್ತೆ  ಅಂತ ..!!!!!
   ನನಗೆ  ಈ ಪ್ರೀತಿ , ಸ್ನೇಹ  ಇಂತಹ  ವಿಷಯಗಳಲ್ಲಿ  ತುಂಬಾ ಆಸಕ್ತಿ . ಈ ವಿಷಯಗಳ  ಕುರಿತು ಸ್ನೇಹಿತರೊಂದಿಗೆ   ಮಾತಾಡ್ತಾ ಇರ್ತೀನಿ , ಇದಕ್ಕೆ ಸಂಭಂದಿಸಿದಂತೆ ಲೇಖನಗಳು , ಕಾದಂಬರಿಗಳು  ಹಾಗೂ ಚಲನಚಿತ್ರಗಳನ್ನು ಆಗಾಗ  ನೋಡ್ತಾ ಇರ್ತೀನಿ . ತುಂಬಾನೆ  ಖುಷಿ ಕೊಡುತ್ತೆ . ಆದರೂ ನನಗೆ  ಆಧುನಿಕ  ಪ್ರೇಮದಂತೆ , ಆಧುನಿಕ  ಸ್ನೇಹದ ಮೇಲೆ ಕೂಡ ಅಸಹ್ಯ ಅನ್ನೋ ಭಾವನೆ ಮೂಡ್ತಾ ಇದೆ . ಯಾವಾಗ ಬೇಕಾದರೂ ಹುಟ್ಟಿಕೊಳ್ಳುತ್ತೆ  ಹಾಗೆ ಯಾವಾಗ  ಬೇಕಾದರೂ  ಸಾಯುತ್ತಿದೆ ....
ಕೆಲವೊಂದು ಕಡೆಗಳಲ್ಲಿ ಪ್ರೀತಿ ಹೇಗೆ ತನ್ನ ಘನತೆ - ಗೌರವವನ್ನು ಕಳೆದು ಕೊಳ್ತಾ ಇದಿಯೋ  ಹಾಗೆ ಸ್ನೇಹವೆಂಬ ಪವಿತ್ರ (???) ಸಂಬಂಧವೂ ಸಹ ಹಲವು ಕಡೆಗಳಲ್ಲಿ ತನ್ನ ಪ್ರಭುದ್ದತೆ ಯನ್ನು ವಿನಾಶದ ಅಂಚಿಗೆ ತಳ್ಳುತ್ತಿದೆ . ನಾನು  ಹೀಗೆ  ಸ್ನೇಹದ  ಕುರಿತಾಗಿ ಮಾತನಾಡುತ್ತಿರುವುದಕ್ಕೆ ಹಲವು ಕಾರಣಗಳಿವೆ . ಹತ್ತಿರದಿಂದ  ನಾನು ಕಂಡ ಅನೇಕ  ಸಂಗತಿಗಳು ,ನನ್ನ ಅನುಭವಕ್ಕೆ ಬಂದ  ಕೆಲವೊಂದು ವಿಷಯಗಳು  ಹೀಗೆ  ಅನೇಕ . ನನ್ನ ಮನಸ್ಸೆಂಬ ಪುಟ್ಟ ಮನೆಯ ಬಾಗಿಲನ್ನು ತಟ್ಟಿ ತಟ್ಟಿ ಎಬ್ಭಿಸಿದ  ಹಲವು ಸಂಗತಿಗಳು ,ನೈಜ ಘಟನೆಗಳೇ ಇದಕ್ಕೆ ಮೂಲ ಕಾರಣ.....
  ನಾವು ದೊಡ್ದವರಾಗ್ತಾ ಹೋದಹಾಗೆ ನಮ್ಮ ಭಾವನೆಗಳು ,ಜೀವನಶೈಲಿ ,ಚಿಂತನೆ  ಹೀಗೆ  ಎಲ್ಲವೂ ಬದಲಾಗುತ್ತಾ ಸಾಗುತ್ತದೆ . ನಮ್ಮ ಮನದಲ್ಲಿನ  ಅನೇಕ ಭಾವನೆಗಳನ್ನು ಹಂಚಿಕೊಳ್ಳಲು ಅನುಕೂಲವಾಗುವಂತಹ  ಒಂದು ಆತ್ಮೀಯವಾದ  ಹೃದಯಕ್ಕಾಗಿ ನಮ್ಮ ಮನಸ್ಸು ಪರಿತಪಿಸುತ್ತಿರುತ್ತದೆ . ನನಗೂ ಒಬ್ಬ ಆತ್ಮೀಯ ಗೆಳೆಯ / ಗೆಳತಿ  ಬೇಕು ಅಂತ ಪ್ರತಿಯೊಂದು ಮನಸ್ಸಿಗೂ ಅನ್ನಿಸಿರುತ್ತದೆ . ಹೀಗೆ  ಆತ್ಮೀಯತೆಯ ಹುಡುಕಾಟದ  ಹಾದಿಯಲ್ಲಿ ನಮ್ಮ ಸನಿಹಕ್ಕೆ ಬಂದು , ನಮ್ಮ ಭಾವನೆಗಳಿಗೆ  ಸ್ಪಂಧಿಸುವಂತಹ  ಮನಸ್ಸಿನೊಂದಿಗೆ ನಮ್ಮ ಅಮೂಲ್ಯವಾದ  ಸ್ನೇಹ  ಆರಂಭಗೊಳ್ಳುತ್ತದೆ . ನಮಗೆ  ಎಲ್ಲರೂ ಗೆಳೆಯ / ಗೆಳತಿಯರಾಗಬಹುದು ಆದರೆ   ಎಲ್ಲರನ್ನೂ ಆತ್ಮೀಯರು ( best friend) ಅನ್ನೋದಕ್ಕೆ  ಸಾಧ್ಯನೇ ಇಲ್ಲ ... ಈ  ಆತ್ಮೀಯತೆ  ಅನ್ನೋದು ಹೇಗೆ  ಹುಟ್ಟಿಕೊಳ್ಳುತ್ತದೆಯೋ ಗೊತ್ತಿಲ್ಲ , ಆದರೆ  ಬೇರೆ ಬೇರೆ ಮನಸ್ಥಿತಿಯನ್ನೂ ಅರ್ಥೈಸಿಕೊಳ್ಳುವುದು ,ಭಾವನೆಗಳಿಗೆ  ಪರಸ್ಪರ  ಸ್ಪಂಧಿಸುವ ಪರಿ, ಸುಖ ಕಷ್ಟ ,ದುಃಖ  ಧುಮ್ಮಾನ ಗಳನ್ನು  ಹಂಚಿಕೊಳ್ಳುವ , ಪರಸ್ಪರ ಸಮಾಧಾನ ಪಡಿಸಿಕೊಳ್ಳುವಂತಹ  ಸಂಧರ್ಭಗಳು  ಹೀಗೆ  ಇವೆ ಮೊದಲಾದ  ಸಂಗತಿಗಳು ಆತ್ಮೀಯತೆಗೆ  ತಳಹದಿಯಾಗುತ್ತದೆ . ಆತ್ಮೀಯ ಗೆಳೆತನ  ಹೀಗೆ  ಹಂತ ಹಂತವಾಗಿ  ಮುಂದುವರಿಯುತ್ತಾ ಹೋಗುತ್ತದೆ . ಅನೇಕ  ಸಂಧರ್ಭ ಗಳಲ್ಲಿ  ಕೆಲವು  ಸಣ್ಣ ಪುಟ್ಟ ಮುನಿಸುಗಳೂ ಸಹ  ಬರಬಹುದು ಆದರೆ  ಸ್ನೇಹವೆಂಬ ಪವಿತ್ರವಾದ  ಶಕ್ತಿಯ ಮುಂದೆ  ಆ ಅನುಮಾನ ,ಮುನಿಸುಗಳು  ಹೆಚ್ಚು ದಿನ  ಬದುಕಿ ಉಳಿಯಲಾರವು ( ನಿಮ್ಮ ಸ್ನೇಹ  ಪವಿತ್ರವಾಗಿದ್ದು ಅಷ್ಟು ಆಳವಾಗಿದ್ದರೆ  ಮಾತ್ರ ).
 ಆದರೆ  ಪ್ರಸ್ತುತ  ದಿನಗಳಲ್ಲಿ  ಅದೇಕೋ ಗೊತ್ತಿಲ್ಲ ಹಲವು ಕಾರಣಗಳಿಂದ  ಅನೇಕ  ಸ್ನೇಹ  ಸಂಭಂದಗಳು ಆಗಾಗ್ಗೆ  ಮುರಿದುಬೀಳುತ್ತಿರುತ್ತವೆ . ಸ್ನೇಹ ಅನ್ನೋದು ಕೇವಲ ಕಥೆ ಕವನ ಗಳಲ್ಲಿ, ಚಲನಚಿತ್ರಗಳಲ್ಲಿ  ನೋಡುವುದಕ್ಕಷ್ಟೇ ಸೀಮಿತ  ಹೊರತು  ದೈನಂದಿನ  ಜೇವನದಲ್ಲಿ  ಅದರ  ಮಹತ್ವ  ನಮ್ಮ ಅನುಭವಕ್ಕೆ  ಅಷ್ಟೇ  ನಿಜ  ಎಂಬಂತೆ  ಬರುವುದೇ ಇಲ್ಲ . ಸ್ನೇಹ  ಸಂಭಂದಗಳು  ಏರ್ಪಡುವುದಕ್ಕೆ ಬೇಕಾಗುವಷ್ಟು ಆಸಕ್ತಿ ,ಹೊಂದಾಣಿಕೆಯ ಮನೋಭಾವ ,ತಾಳ್ಮೆ,ಅನುಮಾನಗಳನ್ನು ಮೆಟ್ಟಿ ನಿಲ್ಲುವಂತಹ ಶಕ್ತಿ  ನಮ್ಮ ಜೊತೆಯಲ್ಲಿ ಸದಾ ಇರಬೇಕು . ಹೀಗೆ  ಇದ್ದಾಗ  ಮಾತ್ರ ನಮ್ಮ ಸ್ನೇಹ  ಚಿರವಾಗಿರಲು  ಸಾಧ್ಯ. ಇಬ್ಬರೂ ಪರಸ್ಪರ  ಹೊಂದಿಕೊಂಡು ಎಲ್ಲಾ ವಿಷಯಗಳನ್ನು ಸಮನಾಗಿ ಹಂಚಿಕೊಳ್ಳಬೇಕು . ಪರಸ್ಪರ  ನಿರ್ಲಕ್ಷ್ಯ , ತೆಗಳಿಕೆ ,ಅನುಮಾನ  ಅನ್ನೋದು ಬರಬಾರದು .ಇಬ್ಬರಲ್ಲಿ  ಒಬ್ಬರು ದೂರವಾಗುತ್ತಿದ್ದರೆ  ಎಂದರೆ  ಇನ್ನೊಬ್ಬರು ಆದಷ್ಟು ಅವರನ್ನು ಕಾಪಾಡಿಕೊಳೋದಕ್ಕೆ ಪ್ರಯತ್ನ ಪಡಬೇಕು ಯಾಕಂದ್ರೆ ನಿಮ್ಮ ಸ್ನೇಹ ಸುಮ್ಮನೆ ಏರ್ಪಟ್ಟಿಲ್ಲ  ಅನ್ನೋದು ನೆನಪಿರಲಿ . ಅದರ ಹಿಂದೆ  ಹಲವು ಕಾರಣಗಳಿವೆ, ಹಲವು ಏಳು ಬೀಳು ಗಳೂ ಬಂದಿರುತ್ತವೆ. ನಿಮ್ಮ ಸ್ನೇಹ  ಅಷ್ಟು ಆಳವಾಗಿದ್ದೂ  ಪವಿತ್ರವಾಗಿದ್ದರೆ ಮಾತ್ರ ನಿಮಗೆ  ಅದನ್ನು ಏಕೆ  ಅಳಿಯದಂತೆ  ಉಳಿಸಿಕೊಳ್ಳಬೇಕು ಎಂಬುದರ ಮಹತ್ವ ನಿಮ್ಮ ಅರಿವಿಗೆ ಬಂದಿರುತ್ತದೆ . ಆದರೆ ನನ್ನ ಅನುಭವದ  ಪ್ರಕಾರ  ಸ್ನೇಹ ಪವಿತ್ರವಾಗಿದ್ದರೆ ( ನಿಜವಾದ ಆತ್ಮೀಯತೆ ಯಾಗಿದ್ದರೆ  )  ಪರಸ್ಪರ  ಅನುಮಾನ , ತೆಗಳಿಕೆ , ನಿರ್ಲಕ್ಷ್ಯ ಅನ್ನುವಂತಹ  ಪ್ರಶ್ನೆಯೇ ಬರುವುದಿಲ್ಲ...

 ಇಬ್ಬರ  ಚಿಂತನೆಗಳು , ವ್ಯಕ್ತಿತ್ವ ,ನಡೆ ನುಡಿಗಳಲ್ಲಿ ಹಲವು ವ್ಯತ್ಯಾಸಗಳಿರುತ್ತವೆ  ಆದರೂ ಸಹ  ಆತ್ಮೀಯತೆಯ ಪ್ರಶ್ನೆ ಬಂದಾಗ  ಇಬ್ಬರೂ ಒಂದೇ ಎಂಬ ಚಿತ್ರಣ ಕಾಣುತ್ತದೆ . ಗೆಳೆತನಕ್ಕೆ ಯಾವುದೇ ನಿಯಮವಿರುವುದಿಲ್ಲ , ಭೇಧ ಭಾವ ವಿರುವುದಿಲ್ಲ . ಹೆಣ್ಣು ಗಂಡು ,ವಯಸ್ಸು , ಅವರ ನಡುವಿನ ಅಂತರ  ಹೀಗೆ  ಈ ಮೇಲಿನಂತೆ  ಯಾವುದೇ  ವಿಷಯಗಳು ಅಡ್ಡ ಬರುವುದಿಲ್ಲ .
 ಆದರೆ  ಗಂಡು ಹೆಣ್ಣಿನ ವಿಷಯ ಬಂದಾಗ ಮಾತ್ರ  ಅವರ  ಸ್ನೇಹ  ಎಷ್ಟು ಅಮೂಲ್ಯವಾಗಿದ್ದರೂ , ಎಷ್ಟೇ ಪ್ರಾಮಾಣಿಕವಾಗಿದ್ದರೂ ಸಹ  ಅವರನ್ನು ನೋಡುವವರ  ಧೃಷ್ಟಿ  ಮಾತ್ರ ಬೇರೆಯೇ ಆಗಿರುತ್ತದೆ . ಅವರದು ಪವಿತ್ರವಾದ  ಸ್ನೇಹವಾಗಿದ್ದರೂ ಕೂಡ ನೋಡುವ  ಜನರ  ಧೃಷ್ಟಿಯಲ್ಲಿ  ಅವರು ಪ್ರೇಮಿಗಳಂತೆಯೇ  ಕಾಣುತ್ತಾರೆ , ಅವರ  ನಡುವೆ  ಇಲ್ಲ ಸಲ್ಲದ  ಸಂಭಂದಗಳನ್ನು ಕಲ್ಪಿಸಿಕೊಂಡು ಮಾತನಾಡುವಂತಹ  ಜನರಿಗೆ  ಕೊರತೆಯೇ ಇರುವುದಿಲ್ಲ ...... " ಅವರಿಬ್ಬರ ನಡುವಿನ  ಗೆಳೆತನ  ಎಷ್ಟು ಮಧುರವಾಗಿತ್ತೆಂದರೆ , ಆಕೆ  ಯಾವುದೇ ಸಂದರ್ಭದಲ್ಲಿ  ಎಂತಹದೇ ಸಹಾಯ ಕೇಳಿದರೂ ಆತ  ಪ್ರಾಮಾಣಿಕತೆಯಿಂದ  ಚಾಚೂ ತಪ್ಪದೆ  ಅವಳ  ಸಹಾಯಕ್ಕೆ ಮುಂದೆ ಬರಿತ್ತಿದ್ದ . ಅವಳ  ಕಷ್ಟ , ದುಃಖ  ಜೊತೆಗೆ  ಅವಳ  ಸುಖ ಸಂತೋಷಗಳಲ್ಲಿಯೂ ಪಾಲುದಾರನಗಿರುತ್ತಿದ್ದ . ರಸ್ತೆ ಬದಿಯಲ್ಲಿ , ಕಾಲೇಜು ಕ್ಯಾಂಪಸ್ ನಲ್ಲಿ  ಸಿಕ್ಕರೆ  ಜೊತೆಯಲ್ಲೇ ನಿಂತು ಮಾತನಾಡೋದು,ಮೊಬೈಲ್ ಗೆ ರಿಚಾರ್ಜ್  ಮಾಡ್ಸೋದು ,ಎಕ್ಸಾಮ್  ಫೀಸ್  ಕಟ್ಟೋದಕ್ಕೆ ಕೊನೆಯ ದಿನ  ಇದ್ದು ಅವಳಿಗೆ  ಏನಾದರೂ ತೊಂದರೆಯಾಗಿದ್ದಲ್ಲ್ಲಿ ಅದನ್ನು ಆತನೇ ಭರಿಸುವುದು, ಅವರ ನಡುವೆ ಮೊಬೈಲ್  ನಲ್ಲಿ ನಿರಂತರ  ಮೆಸ್ಸೇಜು , ಸಂಭಾಷಣೆ  ಹೀಗೆ ಹಲವು ವಿಷಯಗಳು ಸಣ್ಣ ಮನಸ್ಸಿನ  ಕೆಲವು ಜನರಲ್ಲಿ ಇವರ ಬಗೆಗೆ  ಬೇರೆ ತರನಾದ ಭಾವನೆಗಳು , ಇಲ್ಲದ  ಸಂಭಂದಗಳು ಹುಟ್ಟಲು ಕಾರಣವಾಗುತ್ತದೆ . ಹೀಗೆ  ಅವಳ ಕೆಲವು ಸಣ್ಣ ಮನಸ್ಸಿನ ಗೆಳತಿಯರ  ಇಲ್ಲ ಸಲ್ಲದ ಮಾತುಗಳು, ಅವರೇ ಹುಟ್ಟು ಹಾಕುತ್ತಿದ್ದ  ಇಲ್ಲದ  ಸಂಭಂದಗಳು , ಅನುಮಾನ  ಇದೇ ಹತ್ತು ಹಲವು ಕಾರಣಗಳು ಸೇರಿ  ಆಕೆ  ಆತನ ಅಮೂಲ್ಯವಾದ  ಸ್ನೇಹವನ್ನೇ ದಿಕ್ಕರಿಸಿ , ಪರಸ್ಪರ  ಕಣ್ಣೆದುರಿಗೇ ಓಡಾಡಿಕೊಂಡಿದ್ದರೂ ಸಹ  ಈಗ ಅವನ್ಯಾರೋ  ಅವಳ್ಯಾರೋ ........."
 ಹೀಗೆ  ಪವಿತ್ರವಾದ  ಸ್ನೇಹವೂ ಸಹ ಅನುಮಾನಗಳ  ಹುತ್ತ  ಬೆಳೆದು ಹೇಳ ಹೆಸರಿಲ್ಲದಂತೆ  ಮಾಯವಾಗುತ್ತಿದೆ . ಇಲ್ಲಿ ನಾಶವಾದ  ಸ್ನೇಹ ಸಂಭಂದದಲ್ಲಿ  ಇಬ್ಬರ  ಪಾತ್ರವೂ ಇದೆಯಾ ?? ಅಥವಾ ಆಕೆಯದು ಮಾತ್ರ ತಪ್ಪಾ ??  ಅವನ ತಪ್ಪೇನಾದರೂ ಇದೆಯಾ ??  ಈ ರೀತಿಯ ಹಲವು ಪ್ರಶ್ನೆಗಳು ನಮ್ಮ ಕಣ್ಣೆದುರಿಗೆ  ಕಾಣುತ್ತದೆ . ಈ ಪ್ರಶ್ನೆಗಳಿಗೆ  ನಿಮ್ಮ ಉತ್ತರ ?????
 ಅದೇನೇ ಇರಲಿ ನನ್ನ ಅನುಭವದ ಪ್ರಕಾರ  ಅವನ  ಸ್ನೇಹ  ಪವಿತ್ರವಾದದ್ದು  ಅನ್ನೋದು ಮಾತ್ರ ಅಷ್ಟೇ ಸತ್ಯ ಆದರೆ  ಅವಳ  ಅನುಮಾನವೆಂಬ ಹುಚ್ಚು ರೋಗಕ್ಕೆ ಅಮೂಲ್ಯವಾದ  ಸ್ನೇಹ ಬಲಿಯಾದದ್ದು ಮರೆಯಲಾಗದಂತಹ  ನೋವಿನ ಸಂಗತಿ . ಅದೇನೋ ಗೊತ್ತಿಲ್ಲ ಹಲವು  ವಿಷಯಗಳಲ್ಲಿ  ಹುಡುಗರಿಗಿಂತ  ಹುಡುಗಿಯರನ್ನು ನಂಬೋದೇ  ತುಂಬಾ ಕಷ್ಟ . ಮೊನ್ನೆ ನನ್ನ ಬಾಲ್ಯದ ಗೆಳತಿ ಈ ಮೇಲಿನ ವಿಷಯದ ಬಗ್ಗೆ  ಮಾತನಾಡುತ್ತಾ  ಹೇಳಿದಳು - "  ನಾನು  ಹುಡುಗಿಯಾಗಿ ಹೇಳ್ತಾ ಇದೀನಿ , ಹುಡುಗರು ಹುಡುಗಿಯರ ಜೊತೆ ಗೆಳೆತನ ಇಟ್ಕೋಬಾರದು , ಅವರಿಂದ  ಎಷ್ಟು ಸಹಾಯ ಆಗುತ್ತೋ  ಅಷ್ಟನ್ನು ಬಳಸಿಕೊಂಡು ಮತ್ತೆ  ಬಿಟ್ ಹಾಕ್ತಾರೆ , ಎಲ್ಲರಿಗೂ ಆತ್ಮೀಯ ಗೆಳೆತನದ ಮಹತ್ವ ಗೊತ್ತಿರೋದಿಲ್ಲ ...."  ಹೀಗೆ  ಅವಳು ಹೇಳಿದ  ಪ್ರತಿಯೊಂದು ಮಾತು ನನಗೆ  ತಕ್ಕ ಮಟ್ಟಿಗೆ ಸರಿ ಅನ್ನಿಸಿತು  ಏಕೆಂದರೆ  ನನ್ನ ಅನುಭವದ ಜೊತೆ  ಅವಳ  ಮಾತು ಹೊಂದಿಕೆಯಾಗಿತ್ತು ....
 ನಮ್ಮ ಸ್ನೇಹ ಅತೀ ಆಳವಾಗಿದ್ದು ಅಮುಲ್ಯವಾಗಿದ್ದರೆ , ಪ್ರೇಮಿಗಳ ಪ್ರೀತಿ ಹಟಾತ್ತನೆ  ಮುರಿದು ಬಿದ್ದಾಗ ಅದೆಷ್ಟು ನೋವಾಗುತ್ತದೋ  ಅದಕ್ಕಿಂತ  ಅತೀ ಹೆಚ್ಚು ನೋವು ಈ ಪವಿತ್ರ ಸ್ನೇಹ ಸಂಭಂದ ಮುರಿದುಬಿದ್ದಾಗ  ಅನುಭವಕ್ಕೆ ಬರುತ್ತದೆ . ನಿಮ್ಮ ಸ್ನೇಹ ಪವಿತ್ರವಾಗಿದ್ದು , ನಿಮ್ಮ ತಪ್ಪಿಲ್ಲದೇ, ಮುರಿದು ಬಿದ್ದ ಸ್ನೇಹದ ಮರುಜೀವಕ್ಕಾಗಿ  ನಿಮ್ಮ ಮನಸ್ಸು ಪರಿತಪಿಸುತ್ತಿದ್ದು , ನಿಮ್ಮ ಗೆಳೆಯ / ಗೆಳತಿಯಿಂದ  ಪುನಃ  ಪುನಃ  ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದು , ಸ್ನೇಹದ  ಮರು ಹುಟ್ಟೇ ಕಷ್ಟ ಎನ್ನಿಸಿದರೆ  ದಯವಿಟ್ಟು ನಿಮ್ಮ ಪ್ರಯತ್ನವನ್ನು ಅಲ್ಲಿಗೆ  ಬಿಟ್ಟು ಬಿಡಿ . ಕೊನೆಯ ಬಾರಿ  ನಿಮ್ಮ ಸಂತೋಷಕ್ಕಾಗಿಯಾದರೂ ಮರೆಯಲಾಗದ ಒಂದು ಕಾಣಿಕೆಯನ್ನು  ಅವರಿಗೆ  ತಲುಪಿಸಿ ಅವರ ಜೀವನದಿಂದ  ಹೊರಬಂದುಬಿಡಿ . ಈ  ಕಾಣಿಕೆ ಏಕೆಂದರೆ ಅವರಿಗೆ ಜೀವಕ್ಕೆ ಜೀವ ಕೊಡುವಂತಹ  ಸ್ನೇಹಕ್ಕಿಂತ ಹೆಚ್ಚು ನಿರ್ಜೀವಿಗಳ  ಮೇಲೆಯೇ  ನಂಬಿಕೆ ...!!!!  ನಮಗೆ  ನಮ್ಮಂತಹ  ಪವಿತ್ರವಾದ  ಹೃದಯವಂತರೇ ಗೆಳೆಯರಾಗಿ , ಆತ್ಮೀಯರಾಗಿ  ನಮ್ಮ ಜೀವನದ  ಹಾದಿಯಲ್ಲಿ  ಮತ್ತೆ  ಬರುತ್ತಾರೆ  ಎನ್ನುವ  ಆತ್ಮ ವಿಶ್ವಾಸದೊಂದಿಗೆ  ನಮ್ಮ ಮುಂದಿನ  ಸಂತಸದ  ದಿನಗಳೆಡೆಗೆ  ನಮ್ಮ ಜೀವನದ ಪಯಣ ಸಾಗುತ್ತಿರಬೇಕು ..............................

Sunday, 15 January 2012

ಕಳೆದು ಹೋದ ಗೆಳ(ತಿಯ)ತನದ ನೆನಪಲ್ಲಿ ................

 ಸ್ನೇಹ ಅತ್ಯಂತ ಅಮೂಲ್ಯವಾದ ಸಂಭಂದ ಆಲ್ವಾ??? ಪ್ರೀತಿ ಸ್ನೇಹ ಸಂಭಂದಗಳು ಹೇಗೆ ಹುಟ್ಟುತ್ತೋ,ಹೇಗೆ ಸಾಯುತ್ತೋ ಗೊತ್ತಾಗೋದೆ ಇಲ್ಲ ..... ಇಂತಹ ಸಂಭಂದಗಳನ್ನ ಕೊನೆಯವರೆಗೂ ಉಳಿಸುಕೊಂಡು ಹೋಗೋದೇ ಒಂದು ದೊಡ್ಡ ಸಾಧನೆ ಅಂತ ಹೇಳ್ಬೋದು .... ಎಲ್ಲರ ಜೀವನದಲ್ಲೂ  ಇಂತಹ ಅಮೂಲ್ಯ ಸಂಭಂದಗಳು ಸೃಷ್ಟಿಯಾಗುವುದು ಬಹಳ ವಿರಳ .... ಹೇಗೋ ಹುಟ್ಟಿಕೊಂಡಂತಹ ಇಂತಹ ಸಂಭದಗಳು ಬಹು ಬೇಗ ಅಸ್ತಿತ್ವ ಕಳೆದುಕೊಳೋದಕ್ಕೆ ಬಲವಾದ ಕಾರಣಗಳೇ ಬೇಕಾಗುತ್ತೆ... ಆದರೆ ಕಾರಣವಿಲ್ಲದೆ ಈ ಸಂಭಂದಗಳು ನಶಿಸಿದಾಗ ಆಗುವ ನೋವುಗಳ ಜೊತೆಗೆ ಮುಂದಿನ ಜೀವನ ನಡೆಸುವುದು ಸಾಧ್ಯನಾ....?????
  ಹಳೆಯ ಗೆಳೆಯ/ಗೆಳತಿ ಯೊಂದಿಗೆ ಕಳೆದ ಸಂತಸದ ದಿನಗಳ ನೆನಪಲ್ಲಿ ಬದುಕುವುದು ಹೇಗೆ ಅನ್ನೋದು ಇವಾಗ ಅನುಭವಕ್ಕೆ ಬರ್ತಾ ಇದೆ ......  ನೀನು ನನ್ನ ಲೈಫ್ ನಲ್ಲಿ ಬಂದಿದ್ದೆ ಆಶ್ಚರ್ಯ ,ಆದ್ರೆ ಇಷ್ಟೊಂದು ಬೇಗ ನಾನು ನಿನಗೆ ಬೇಡ ಆಗ್ತೀನಿ ಅನ್ನೋದೆ ಗೊತ್ತಿರ್ಲಿಲ್ಲ .... ಒಂದುವೇಳೆ ಈ ವಿಷಯ ಮೊದಲೇ ಗೊತ್ತಿದ್ರೆ ನಿನ್ ಲೈಫ್ ನಲ್ಲಿ ನಾನು ಬರ್ತಾನೆ ಇರ್ಲಿಲ್ಲ ... ಹಾಯಾಗಿದ್ದ ಜೀವನದಲ್ಲಿ ಇಷ್ಟೊಂದು ನೋವಿನ ನೆನಪುಗಳನ್ನು ಬಿಟ್ಟು ಮರೆಯಾಗಿ ಹೋದೆ.... ನನ್ನಿಂದ ದೂರ ಹೋಗೋದಕ್ಕೆ ಕಾರಣವಾದರು ಹೇಳಿ ಹೋಗಬಾರದಿತ್ತೆ....???
 ನಿನ್ನ ನೆನಪುಗಳ ಜೊತೆ ನನ್ನ ಬಳಿ ಉಳಿದಿರುವುದು ಕೇವಲ ಉತ್ತರ ಸಿಗದ ಪ್ರಶ್ನೆಗಳು..... ಸಂಭಂದದ ಕೊಂಡಿ ಕಳಚಿದ ಕಾರಣವಾದರು ತಿಳಿಸಿ ಹೋಗಬಹುದಿತ್ತಲ್ವಾ.....
 ಕೇವಲ ಅತೀ ಕಡಿಮೆ ಅವದಿಯಲ್ಲಿ ನನ್ನ ನಿನ್ನ ಸ್ನೇಹ ಪ್ರಾರಂಭ ಆಗಿದ್ದು. ನಮ್ಮ ಮೊದಲ ದಿನಗಳು ಅದೆಷ್ಟು ಮಧುರ.... ನೀನು ನನ್ನ ಜೊತೆ ಕಳೆದ ದಿನಗಳು,ಹಂಚಿಕೊಂಡ ಭಾವನೆಗಳು ನಾ ಹೇಗೆ ಮರೆಯಲಿ...?? ಸಣ್ಣ ಮಗುವಿನಂತಿದ್ದ ನಿನ್ನ ಮನಸ್ಸು ಇಷ್ಟೊಂದು ಕ್ರೂರೀನಾ...??
 ನಿನಗಾಗಿ ಕಳೆದ ಆ ದಿನಗಳು ಈಗ ವ್ಯರ್ಥ ಅನ್ನಿಸುತ್ತಿದೆ..  ಸಂಭಂದ ಅರ್ಥವೇ ಗೊತ್ತಿಲ್ವಾ ನಿನಗೆ..?? ನಿನ್ನ ಜೀವನದ ಕೊನೆಯ ಉಸಿರಿನ ವರೆಗೂ ನನ್ನ ಸ್ನೇಹವನ್ನು ಉಳಿಸಿಕೊಳ್ತಿನಿ ಅಂತ ಹೇಳಿದ್ದು ಬರೀ ಸುಳ್ಳು ಅಲ್ವಾ...??
 " ಏ ದೋಸ್ತಿ ಹಮ್ ನಹೀ ಚೋಡೆಂಗೆ  ..."  ಸಾಂಗ್ ಇಷ್ಟ ಅಂತ ಹೇಳಿದ್ದೆ,, ಆದ್ರೆ ಇದರ ಅರ್ಥವೇ ನಿನಗೆ ತಿಳಿದಿಲ್ಲ ಅಂತ ಈಗ ಅನ್ನಿಸ್ತಾ ಇದೆ... ನನ್ನ ಎಲ್ಲ ಗೆಳೆಯ ಗೆಳತಿಯರಿಗಿಂತ ನೀನು ಅದೆಷ್ಟೋ ಭಿನ್ನ ... ನಿನ್ನ ಜೊತೆಗೆ ಕಳೆದಿದ್ದು ಕೇವಲ ಎರಡು ವರ್ಷಗಳು... ಕೇವಲ ಈ ಎರಡು ವರ್ಷಗಳಲ್ಲಿ ನನ್ನಲ್ಲಿ ನೀನು ತಂದ  ಅನೇಕ ಬದಲಾವಣೆಗಳು , ನನ್ನ ನೊಂದ ಮನಸ್ಸಿಗೆ ನೀನು ಕೊಟ್ಟ ಸಮಾಧಾನ,ಧೈರ್ಯ,ನನ್ನಲ್ಲಿ ಮೂಡಿಸಿದ ಆಶಾಭಾವನೆ, ಸಂತೋಷ  ಅದೆಷ್ಟೋ.... 
 ಆದರೆ ಈಗ ಅದೆಲ್ಲಕ್ಕಿಂತ ದೊಡ್ಡ ನೋವಿಗೆ ನೀನೆ ಕಾರಣಲಾದೆ.. 
ನಿನ್ನ ಜೀವನ ನಿನ್ನ ಇಷ್ಟದಂತೆ ಇರಬೇಕು , ಬೇರೆಯವರು ನಿನ್ನ ಜೀವನವನ್ನು ನಿಯಂತ್ರಿಸಬಾರದು.. ಈ ಪ್ರಪಂಚದಲ್ಲಿ ಪರರ ಜೀವನದ ಬಗ್ಗೆ ಮಾತಾಡೋದಕ್ಕೆ ಎಲ್ರಿಗೂ ಬರುತ್ತೆ ಆದರೆ ಅವರ ಜೀವನದ ಬಗ್ಗೆ ಹೊರತು ಪಡಿಸಿ...ನಮಗೆ ಅನ್ನಿಸಿದ್ದನ್ನು ನಾವು ಮಾಡೋದನ್ನ ಕಲಿಬೇಕು.. ನಾವು ಏನೇ ಮಾಡಿದ್ರು ಅದರ ಬಗ್ಗೆ ಜನರು ಏನಾದ್ರು ಹೇಳೋದಕ್ಕೆ ಕಾಯ್ತಾ ಇರ್ತಾರೆ.. ಯಾರದ್ದೋ ಮಾತನ್ನು ಕೇಳಿ ನನ್ನ ಸ್ನೇಹವನ್ನೇ ದಿಕ್ಕರಿಸಿ ಹೋಗಿರುವೆ.. ಹೋಗುವುದಕ್ಕೂ ಮುನ್ನ ಒಮ್ಮೆ ಯೋಚಿಸಬಹುದಿತ್ತು.....
 ನಿನ್ನ ಜೊತೆ ನಾನು ಕಳೆಯಬೇಕೆಂದಿದ್ದ ಸಾವಿರಾರು ಆಸೆ ಆಕಾಂಕ್ಷೆಗಳು ನುಚ್ಚು ನೂರಾದಂತಿದೆ . ನಿನ್ನ ಜೊತೆ  ಕ್ಯಾಂಪಸ್ ನಲ್ಲಿ  ಸುತ್ತಬೇಕು, ನಿನ್ ಜೊತೆ  ಸಭೆ ಸಮಾರಂಭಗಳಲ್ಲಿ ಭಾಗವಹಿಸಬೇಕು , ನಿನ್ ಜೊತೆ ಮೂವಿ ನೋಡ್ಬೇಕು , ನನ್ನ ನಿನ್ನ ಜನುಮದಿನದ ಸಂತೋಷ ಗಳನ್ನೂ ಜೊತೆಯಲ್ಲೇ ಆಚರಿಸ ಬೇಕೆಂದಿದ್ದೆ ..... ಆದರೆ ಈ ಮೇಲಿನ  ಯಾವುದೇ ವಿಷಯಗಳಲ್ಲಿ ನಿನಗೆ ಆಸಕ್ತಿ ಇಲ್ಲ , ನಿನಗೆ  ಇದು ಯಾವುದೂ ಇಷ್ಟ ಆಗೋದಿಲ್ಲ ಅನ್ನೋದು ನನಗೆ  ಗೊತ್ತಿತ್ತು , ಯಾಕಂದ್ರೆ ನೀನು ನಮ್ಮನ್ನು ನೋಡೋ ಜನ ನಮ್  ಬಗ್ಗೆ  ಏನೇನೋ  ಮಾತಾಡ್ಕೊತಾರೆ  ಅಂತ  ಭಯ ಪಡ್ತಿದ್ದೆ , ನೀನು ಬದುಕ್ತಾ ಇರೋದೇ  ಬೇರೆಯವರ  ದೃಷ್ಟಿ ಕೋನದಲ್ಲಿ  ಆಲ್ವಾ...?? ನಿನಗೆ  ಇದರಿಂದ  ನೋವು  ಆಗಬಾರದು ಅಂತಾನೆ  ನನ್ನ ಈ ಮೇಲಿನ  ಯಾವುದೇ  ಆಸೆಗಳನ್ನು ನಿನ್  ಬಳಿ  ಹೇಳದೆ  ಸುಮ್ಮನಿದ್ದೆ .. ನಿನ್ನನ್ನು  ನಿನ್ನ  ಮನಸ್ಸನ್ನು ಇಷ್ಟು ಆಳವಾಗಿ  ಅರ್ಥ  ಮಾಡಿಕೊಂಡಿದ್ದ  ಈ ಪುಟ್ಟ ಮನಸ್ಸನ್ನೇ  ನೀನು  ಹೀಗೆ  ದಿಕ್ಕರಿಸಿ  ಹೋಗಬಹುದಿತ್ತ್ತೆ ...??  
      ನಮ್ಮನ್ನು ತುಂಬಾ ಆಳವಾಗಿ  ಅರ್ಥ  ಮಾಡ್ಕೊಂಡು , ನಮಗೆ  ನೋವಾಗದಂತೆ , ನಮ್ಮ  ಇಷ್ಟದಂತೆ  ಅವರ  ಜೀವನ  ಶೈಲಿ ಯನ್ನೇ  ನಮಗಾಗಿ  ಬದಲಾಯಿಸಿಕೊಂಡು , ನಮಗಾಗೆ  ಬದುಕನ್ನೇ  ಮುಡಿಪಾಗಿ  ಇಡೋ ಅಂತ  ವ್ಯಕ್ತಿಗಳು  ನಾವು ಹುಡುಕಿದರೂ  ಸಿಗೋದು  ತುಂಬಾ ಕಷ್ಟ. ಇದು ನಿನಗೆ ಅರ್ಥ ಆಗ್ಬೋದು ಅಂತ ಅಂದ್ಕೊಂಡಿದೀನಿ .............  ಇದಕ್ಕಿಂತ  ಜಾಸ್ತಿ ಹೇಳೋದಕ್ಕೆ ನನಗೆ ಬರೋದಿಲ್ಲ .. 
                                ಈಗಲು ಸಹ ನಿನ್ನ ಬರುವಿಕೆಯನ್ನೇ ಬಯಸುತ್ತಿರುವೆ.. ಏಕೆಂದರೆ ನಿನ್ನ ಮೊದಲಿನ ಗೆಳೆತನದ ಪ್ರಭಾವ ನನ್ನನ್ನು ಕಾಯುವಂತೆ ಮಾಡಿದೆ.. ನನ್ನ ಅರಿವಿಗೆ ಬಾರದೆ ನನ್ನಿಂದ ನಿನ್ನ ಮನಸ್ಸಿಗೆ ಏನಾದರು ನೋವಾಗಿದ್ದರೆ ಅದನ್ನು ಮನ್ನಿಸಿ ನಮ್ಮ ಸ್ನೇಹಕ್ಕೆ ಮರು ಜೀವ ಕೊಡು ... ಈ ಜೀವನದಲ್ಲ್ಲಿ ನಿಜವಾದ ಸಂಭದಗಳು ಸೃಷ್ಟಿಯಗುವುದೇ ವಿರಳ .. ನನ್ನ ನಿನ್ನ ನಡುವಿನ ಅಂತಹದ್ದೊಂದು  ಬಾಡಿ ಹೋಗಿರುವ ಅಮೂಲ್ಯವಾದ ಸಂಭದಕ್ಕೆ ಮತ್ತೆ ನೀರೆರೆದು ಜೀವ ನೀಡು.....  ನೀನಿರದ ಈ ಜೀವನ ವ್ಯರ್ಥ ಅನ್ನಿಸುತ್ತಿದೆ..... ನಿನಗಾಗಿ ನನ್ನ ಹೃದಯದ ಬಾಗಿಲು ಸದಾ ತೆರೆದಿರುತ್ತದೆ... ನೀ ಬರುವ ಹಾದಿಯನ್ನೇ ಎದುರು ನೋಡುತ್ತಿರುವೆ........... 
                                     
                       ಇಂತಿ ನಿನ್ನ ಪ್ರೀತಿಯ ಗೆಳೆಯ .......  

Friday, 11 November 2011

ಹೋಗಲಿರುವ ಜೀವಕ್ಕೆ ಅದೆಷ್ಟು ಆಸೆಗಳೋ..........
       ನಮ್ಮ ಜೀವನ ಪ್ರಾರಂಭ ಅಗೋದೇ ಬಹುಶ ಆಸೆಗಳಿಂದ ಅನ್ಸುತ್ತೆ , ಎಲ್ರಿಗೂ ಅವರದ್ದೇ ಆದ ಅನೇಕ ಆಸೆ ಗಳಿರುತ್ತೆ . ತಮ್ಮ ಜೀವಕ್ಕಿಂತ ಹೆಚ್ಚಿನ ಆಸೆಗಳಿರೊ ಅಂತ ಅನೇಕರನ್ನ ನಾವ್ ನೋಡಬೋದು ... ಮರೆಯಾಗಿ ಹೋಗುವ ಈ ಜೀವಕ್ಕೆ ಅದೆಷ್ಟು ಆಸೆಗಳಿರುತ್ತೆ ಅಲ್ವಾ ...???
ನಾವು ಚಿಕ್ಕವರಾಗಿದ್ದಾಗ ಚಾಕೊಲೇಟ್ , ಗೊಂಬೆ ಗಳನ್ನೆಲ್ಲ ನೋಡ್ದಾಗ ಅದು ಬೇಕೇ ಬೇಕು ಅನ್ನೋ ಹಠ ,ಆಸೆ ಇರ್ತಿತ್ತು . ದೊಡ್ದವರಾಗ್ತಾ ಬಂದ್ ಹಾಗೆ ನಮ್ಮ ಆಸೆಗಳ ಲೋಕವೇ ಬದಲಾಗ್ತಾ ಹೋಗತ್ತೆ ... ನಮ್ಮ ಆಸೆ ಆಕಾಂಕ್ಷೆ ಗಳಿಗೆ ಮಿತಿನೇ ಇಲ್ವೇನೋ ಅನ್ಸತ್ತೆ . ನನಗು ಸಹ ತುಂಬಾ ಆಸೆಗಳಿದ್ವು ,ಬೆಟ್ಟದಷ್ಟು  ಆದ್ರೆ ಇವಾಗ ಅದೆಲ್ಲ ಬರಿ ಕನಸು ಅನ್ನಿಸ್ತಾ ಇದೆ.... :(
 ನಾನು ಅನೇಕರನ್ನ ನೋಡಿದೀನಿ ಅವರ ಜೀವನ ಶೈಲಿ , ಆಸೆಗಳನ್ನೆಲ್ಲ ನೋಡಿದ್ರೆ ನಗಬೇಕೋ , ಅಳಬೇಕೋ ಒಂದೂ ಗೊತ್ತಾಗಲ್ಲ ....  ತುಂಬಾ ವಿಷಯಗಳಿದೆ ಆದ್ರೆ ನನಗೆ ಗೊತ್ತಿರೋ ಸ್ವಲ್ಪ ವಿಷಯಗಳನ್ನ ನಾನ್ ನಿಮ್ ಜೊತೆ ಶೇರ್ ಮಾಡ್ಕೋತಾ ಇದೀನಿ.....

 ವಿದ್ಯಾರ್ಥಿ ಜೀವನದಲ್ಲಿ ಅನೇಕ ಆಸೆಗಳಿರುತ್ತೆ , ಎಲ್ರಿಗಿಂತ ಜಾಸ್ತಿ ಮಾರ್ಕ್ಸ್ ತಗೋಬೇಕು,ಕ್ಲಾಸ್ ನಲ್ಲಿ ಫಸ್ಟ್ ಬರಬೇಕು ಹೀಗೆ ಹಲವು ಆಸೆಗಳಿರುತ್ತೆ... ಅಯ್ಯೋ ಪರೀಕ್ಷೆ ಲಿ ಪಾಸ್ ಆದ್ರೆ ಸಾಕು ಅನ್ನೋ ನಮ್ ತರದವರೂ ಇದಾರೆ... ಪರೀಕ್ಷೇಲಿ ತುಂಬಾ ಕಡಿಮೆ ಮಾರ್ಕ್ಸ್ ಬಂತು , ಫೇಲ್ ಅದೆ ಅಂತ ಅದೆಷ್ಟೋ ಜನ ಆತ್ಮಹತ್ಯೆ ಮಾಡ್ಕೊಂಡಿರೋ ಹಾಸ್ಯದ ಸಂಗತಿಗಳೂ ಇದೆ.  ಜೀವನವೇ ಒಂದು ಪರೀಕ್ಷೆ ಅಂತ ಅವರೆಲ್ಲ ತಿಳ್ಕೊಂಡಿದ್ದಿದ್ರೆ ಅವರೆಲ್ಲ ಈ ರೀತಿ ಮಾಡ್ಕೋತಾ ಇರ್ಲಿಲ್ಲ....ನಮ್ಮ ಜೀವಿತಾವದಿಯಲ್ಲಿ ನಮಗೆ ಅದೆಷ್ಟೋ ಸಮಯವಿದೆ , ಏನ್ ಬೇಕಾದ್ರು ಸಾದಿಸ್ಬೋದು ಅಲ್ವಾ ?? ಇಷ್ಟು ಸಣ್ಣ ವಿಷಯಕ್ಕೆಲ್ಲ ಜೀವಾ ನೆ ನಾಶ ಮಾಡ್ಕೊಬೇಕಾ..?? ಒಂದ್ ಕ್ಷೇತ್ರದಲ್ಲಿ ಆಗ್ಲಿಲ್ಲ ಅಂದ್ರೆ ಇನ್ನೊಂದ್ ಕ್ಷೇತ್ರದಲ್ಲಿ ಸಾದನೆ ಮಾಡ್ಬೋದು , ಅದು ಬಿಟ್ಟು ನಮ್ಮನ್ನೇ ನಂಬಿಕೊಂಡಿರುವ ಜೀವಗಳಿಗೆ ನಾವ್ ಮೋಸ ಮಾಡಬಾರದು .....

      ಆರೋಗ್ಯ ದ ಮೇಲೆ ಹೆಚ್ಚು  ಕಾಳಜಿ ವಹಿಸೋ ಜನ ತುಂಬಾ ಇದಾರೆ. ಮಳೇಲಿ ನೆನೆದರೆ ಜ್ವರ ಬರುತ್ತೆ,ಶೀತ ಆಗುತ್ತೆ  ಅಂತಾ ತುಂಬಾ ಕಾಳಜಿ ತಗೊಳೋರು ದಿನಕ್ಕೆ ಐದು ಆರು ಸಿಗರೇಟ್ ಕಾಲಿ ಮಾಡ್ತಾ ಇರ್ತಾರೆ, ಯಾರಾದ್ರೂ ಸ್ಮೋಕ್ ಮಾಡ್ತಾ ಇರೋವಾಗ ತಮ್ಮ ಮೂಗುಗಳನ್ನು ಭದ್ರವಾಗಿ ಮುಚ್ಚಿಕೊಂಡು ಓಡಾಡುವವರೂ ಅನೇಕ !!!

 ಮುಂದೆ ನಮ್ಮ ಜೀವನಕ್ಕೆ ಬೇಕು ಅಂತ ,ಇವತ್ತಿನ ಜೀವನದ ಬಗ್ಗೆ ಯೋಚಿಸದೆ ಹಣ ಕೂಡಿಡುವ ಅದೆಷ್ಟೋ ಜನ ಇದ್ದಾರೆ, ಇವತ್ತು ಒಂದು ರೂಪಾಯಿ ಖರ್ಚು ಮಾಡಲು ಚಿಂತಿಸುವವರು ಮುಂದಿನ ಜೀವನದ ಬಗ್ಗೆ ಯೋಚಿಸುವುದು ಅದೆಷ್ಟು ಸರಿ ..???  ನಾನು ಒಂದು ವರ್ಷದ ಹಿಂದೆ  ಶಿವಮೊಗ್ಗ ದಿಂದ ಹಾಸನ ಕ್ಕೆ ರೈಲಿನಲ್ಲಿ ಹೋಗುವಾಗ ಕೇಳಿದ  ಒಂದು ನೈಜಗಟನೆ -
  " ತುಂಬಾ ಸಂತಸದ ಫ್ಯಾಮಿಲಿ, ಅಪ್ಪ ಅಮ್ಮ ಮಗ ಮಗಳು  ಕೇವಲ ನಾಲ್ಕು ಜನರ ಪುಟ್ಟ ಫ್ಯಾಮಿಲಿ , ಅತ್ಯಂತ ಸಂತೋಷದಿಂದಲೇ ಜೀವನ ನಡೀತಾ ಇತ್ತು.... ತಮ್ಮ ಮಗನ ವಿದ್ಯಾಭ್ಯಾಸಕ್ಕೆ ಅಪ್ಪ ತುಂಬಾ ಕಷ್ಟ ಪಟ್ಟು ಹಣ ಸಂಪಾದಿಸಿದ್ರಂತೆ , ಹಾಗೆ  ಅವನ ವಿದ್ಯಾಭ್ಯಸಾನೂ ನಡೀತಾ ಇತ್ತು. ಬೇರೆ ವಿಷಯಗಳಿಗೆ ಹಣ ಖರ್ಚು ಮಾಡೋಕೆ ಮೊದ್ಲು ಆತ ತುಂಬಾ ಯೋಚಿಸ್ತಾ ಇದ್ರು, ಮಗಳ ಮದುವೆಗೆ ಅಂತ ಸಹ ಹಣ ಕೂಡಿಟ್ಟಿದ್ರು. ಜನ ಅವರನ್ನ ಜಿಪುಣ ಅಂತ ಕರಿತಾ ಇದ್ರು..ಮುಂದಿನ ಜೀವನದ ಬಗ್ಗೆ ತುಂಬಾ ಯೋಚನೆಗಳಿದ್ದಿದ್ರಿಂದ ಅವ್ರು ಜಿಪುಣ ಆಗಿದ್ರು ಅನ್ಸತ್ತೆ. ಹೀಗೆ ಜೀವನ ನಡೀತಾ ಇತ್ತು , ಮಗಳು ಪಿ.ಯೂ.ಸಿ ಗೆ ವಿಧ್ಯಾಭ್ಯಾಸ ಮುಗ್ಸಿದ್ಲು , ನಂತರ ಎರಡು ವರ್ಷಗಳಲ್ಲಿ ಅವಳ ಮದುವೆನೂ ಆಯ್ತು.... ದುರದೃಷ್ಟ ಅಂದ್ರೆ ಮದುವೆ ಆಗಿ ಒಂದು ವರ್ಷದೊಳಗೆ ಭೀಕರ ರಸ್ತೆ ಅಪಘಾತದಲ್ಲಿ ಮಗಳು ಅಳಿಯ ಇಬ್ರೂ ವಿಧಿವಶರಾದರು... ಇತ್ತ ಮಗನ ವಿದ್ಯಾಭ್ಯಾಸನೂ ಮುಗಿತಾ ಬಂದಿತ್ತು .. ಮಗಳ ನೆನಪು ಮಾಸುತ್ತಾ ದಿನಗಳು ಉರುಳುತ್ತಿತ್ತು ..ಇವರ ಜೀವನದ ಅತ್ತ್ಯಂತ ಅಹಿತಕರ ಘಟನೆ ಅಂದ್ರೆ .. ಮಗ  ಎಂ.ಎ  ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾಗ ಅದೇನೋ ಜ್ವರ ಅಂತ ಬಂದು ಮೂರೇ ದಿನದಲ್ಲಿ ಇಹಲೋಕ ತ್ಯಜಿಸಿದ್ದು.... ನೋವಿನ ಮೇಲೆ ನೋವು ಅನುಭವಿಸುತ್ತ ಎರಡು ಜೀವಗಳು ಅದೆಷ್ಟು ದಿನ
ಬದುಕಿರಬಹುದು..... ಚಿಂತೆಯಲ್ಲೇ ಜೀವನ ಸಾಗುತ್ತಿದೆ ... ಕೂಡಿಟ್ಟ ಅಷ್ಟೊಂದು ಹಣ,ಆಸ್ತಿ ಪಾಸ್ತಿ ಯಾರ ಪಾಲಿಗೆ...?? ಅವರ ಕಡೆಯವರು ಅಂತ ಅವರಿಗೆ ಯಾರೂ ಇಲ್ವಂತೆ.. ಅವರ ಮುಂದಿನ ಗತಿ....?????? "
    ನೋಡಿದ್ರಾ ಆಸೆಗಳು  ಎಷ್ಟೊಂದು ಅಲ್ವಾ....???

         ಮತ್ತೊಂದು ಸಂಗತಿ ಅಂದ್ರೆ ಅನೇಕರು ನಮ್ ಫ್ರೆಂಡ್ಸ್ ನಮ್ ಜೊತೆ ನಾವ್ ಅಂದ್ಕೊಂಡಿರೋ ಹಾಗೆ ಇರ್ಬೇಕು ಅನ್ನೋ ಆಸೆ ಇಟ್ಕೊಂಡಿರ್ತಾರೆ ,ಅವರ ಜೀವನ ಶೈಲಿ ಇವರಿಗೋಸ್ಕರ ಬದಲಾಗಬೇಕೆ...?? ಇವರ ಆಸೆ ಆಕಾಂಕ್ಷೆ ಗಳಂತೆ ಅವರಿಗೂ ಇರುತ್ತೆ ಅನ್ನೋದನ್ನ ಮರೆತು  ಅವರ ಸ್ನೇಹವನ್ನೇ ದೂರ ಮಾಡಿಬಿಡ್ತಾರೆ ... ಸ್ನೇಹಿತರು ಒಬ್ರಿಗೊಬ್ರು ಅರ್ತ ಮಾಡ್ಕೊಂಡು , ಹೊಂದ್ಕೊಂಡು ತಮ್ಮ ಸ್ನೇಹನಾ ಶಾಶ್ವತವಾಗ್ ಇರೋಹಾಗ್ ಮಾಡ್ಕೋಬೇಕು , ಕೇವಲ ಆಸೆಗಲಿಗೋಸ್ಕರ ಸ್ನೇಹವನ್ನು ಬಲಿ ಕೊಡಬಾರದು... ಸ್ನೇಹ ಅತ್ಯಂತ  ಅಮೂಲ್ಯವಾದದ್ದು.. ಎಲ್ರಿಗೂ ಅಂತಹ ಅಮೂಲ್ಯ ವಾದ ಸ್ನೇಹ ಸಿಗೋದಿಲ್ಲ .... ಸೀಕ್ಕಿದ್ದನ್ನ ಹಾಳ್ಮಾಡ್ಕೋಬೇಡಿ ......

         ಪ್ರೀತಿ ವಿಷಯಕ್ಕೆ ಬಂದ್ರೆ ಅಲ್ಲೂ ಸಹ ಇಂತಹ ಹಲವು ಆಸೆಗಳಿಂದ ಆಗುವ ದುಷ್ಪರಿಣಾಮಗಳು ಅನೇಕ... ನಾನು ಪ್ರೀತಿಸಿದ ಹುಡುಗ/ಹುಡುಗಿ ಸಿಗ್ಲಿಲ್ಲ ಅಂತ ಅದೆಷ್ಟೋ ಜನ ಆತ್ಮಹತ್ಯೆ ಮಾಡ್ಕೊಂಡಿರೋ ಸಂಗತಿಗಳು ಹಲವಾರು...  ತಮ್ಮ ತಂದೆ ತಾಯಿ ಬಂಧು ಬಳಗ ದವರ ಯೋಚನೆ ಇಲ್ಲದೆ ಕೇವಲ ಕೆಲವು ಕೆಲವು ದಿನಗಳ ಹಿಂದೆ ಹುಟ್ಟಿಕೊಂಡ ಪ್ರೀತಿ ಸಿಗಲಿಲ್ಲ ವೆಂದು , ಜನ್ಮತಃ ವಾಗಿ ಸಿಕ್ಕ ಪ್ರೀತಿಯನ್ನೇ ದಿಕ್ಕರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದು ಅದೆಷ್ಟು ಸರಿ..??? ನನ್ನ ಗೆಳೆಯನೂ ಸಹ ಇಂತಹ ಒಂದು ಹೀನ ಕೃತ್ಯಕ್ಕೆ ಸಾಕ್ಷಿ ಯಾಗಿದ್ದಾನೆ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಬೇಸರ..... ಅವನ ಅಗಲಿಕೆಗಿಂತ ಅವನ ಪೋಷಕರ ಕಣ್ಣೀರಿನ ನೋವಿನ ದಿನಗಳು ನೆನೆಸಿಕೊಳ್ಳುವುದೇ ಕಷ್ಟದ ಸಂಗತಿ.......

                      ಹೀಗೆ ಹಲವು ಆಸೆಗಳ ನಡುವೆ ನಮ್ಮ ಜೀವನ ಸಾಗುತ್ತಿದೆ . ನಮ್ಮ ಆಸೆಗಳು ನಮ್ಮ ಜೀವನ ಏಳಿಗೆಗೆ ಕಾರಣವಾಗಬೇಕೇ ಹೊರತು ನಮ್ಮ , ಅವನತಿ ಗೆ ಕಾರಣವಾಗಬಾರದು ....  ನಮ್ಮನ್ನು ನಂಬಿಕೊಂಡಿರುವ ಅನೇಕ ಜೀವಗಳಿಗೆ ನಿರಾಸೆಯಾಗುವಂತಿರಬಾರದು ....

ಮರೆಯಾಗಲಿರುವ ಈ ಜೀವನದ ಆಸೆಗಳು ಮಿತಿಯಲ್ಲಿದ್ದರೆ  ಒಳಿತಲ್ಲವೇ......?????

Wednesday, 2 November 2011

ಮರೆಯಲಾಗದ ಆ ಜೀವ........


ಕೆಲವು ಸನ್ನಿವೇಶಗಳು, ಕೆಲವು ವ್ಯಕ್ತಿಗಳು ಕೆಲವರ  ಮನಸ್ಸಿನಲ್ಲಿ ಅಳಿಸಲಾಗದೆ ಉಳಿದು ಬಿಡುವಂತಹ ಅನೇಕ  ವಿಷಯಗಳನ್ನು ಎಲ್ರೂ ಕೆಳಿರ್ತಾರೆ ಜೊತೆಗೆ ತಮ್ಮ ಜೀವನದಲ್ಲಿಯೂ ಸಹ ಅನೇಕರಿಗೆ ಇಂತಹ ಅನೇಕ ವಿಷಯಗಳು ಅನುಭವಕ್ಕೆ ಬಂದಿರಬಹುದು, ನಮ್ಮ ಮನಸ್ಸಿಗೆ ತುಂಬಾ ಬೇಜಾರ್ ಆದಾಗ , ನೋವಾದಾಗ ಅಂತಹ ಸನ್ನಿವೇಶಗಳನ್ನ ನೆನೆಪಿಸಿಕೊಂಡರೆ ಸ್ವಲ್ಪ ನೆಮ್ಮದಿ ದೊರಕುವುದಂತೂ ಕಂಡಿತ..... ಇದೇ ರೀತಿ ನಮ್ಮ ನೋವು ನಲಿವುಗಳನ್ನ ಹಂಚಿಕೊಳ್ಳೋಕೆ ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವ ಆ ಜೀವ ನಿಜಕ್ಕೂ ಆದ್ಭುತ .....
ನಾವೂ ಸಹ ಇನ್ನೊಬ್ಬರ ಜೀವನದಲ್ಲಿ ಇಂತಹ ಸ್ಥಾನ ಗಳಿಸುವುದು ಬಹು ದೊಡ್ಡ ಮಾತೇನಲ್ಲ .... ನಮ್ಮ ಆಚಾರ ವಿಚಾರ ಗಳು , ನಮ್ಮ ಜೀವನ ಶೈಲಿ ಅವರ ಮೇಲೆ ತುಂಬಾ ಪ್ರಭಾವ ಬೀರುವಂತಿರಬೇಕು....

 ನನ್ನ ಜೀವನದಲ್ಲಿ ನಾ ಕಂಡ ಅಂತಹ ಒಬ್ಬ ಆದ್ಭುತ ವ್ಯಕ್ತಿಯ ಬಗ್ಗೆ ಈ ನನ್ನ ಮಾತು....
 ತಾಯಿ ತನ್ನ ಮಗುವಿಗೆ ಜನ್ಮ ನೀಡಿದ ಸಂಧರ್ಬದಲ್ಲಿ , ಆ ಪುಟ್ಟ ಕಂದನ ಅಳು ಆಕೆಯ ಮನದಲ್ಲಿ ಅದೆಷ್ಟು ಸಂತೋಷದ ಅಲೆಯನ್ನು ಹುಟ್ಟಿಸುತ್ತದೆಂದರೆ ಅದಕ್ಕೆ ಮಿತಿಯೇ ಇಲ್ಲ , ಬಂಧು ಬಳಗದವರ ಸಂತಸ ಹೇಳಕೂಡದು .... ಇಪ್ಪತ್ತು ವರ್ಷಗಳ ಹಿಂದೆ ನಡೆದ ಇಂತಹದ್ದೇ ಒಂದು ಸಂದರ್ಬವನ್ನು ಆಕೆ ದಿನದಲ್ಲಿ ಒಮ್ಮೆಯಾದರೂ ನೆನೆಸದೆ ಕಳೆದ ದಿನಗಳೇ ಇಲ್ಲ , ಆ ಜನ್ಮ ದಿನದಿಂದ ಆ ಜೀವದ ಕಡೆಯ ದಿನಗಳ ವರೆಗೂ ನಡೆದ ಗಟನೆಗಳು, ಪಟ್ಟ ಕಷ್ಟಗಳು, ಹಂಚಿಕೊಂಡ ಸಂತೋಷ ಇವೆಲ್ಲವನ್ನೂ ಮರೆಯುವುದು ಈ ಜನ್ಮದಲ್ಲಿ ಅಸಾದ್ಯ ...
ಆಕೆಯ ಐವತ್ತು ವರ್ಷಗಳ ಜೀವನದಲ್ಲಿ ನಾ ಕಂಡ ಕೇವಲ ಹತ್ತೊಂಬತ್ತು  ವರ್ಷಗಳು ನನ್ನ ಜೀವನದ ಮರೆಯಲಾಗದ ಮಹಾ ವರ್ಷಗಳು...
 ಆಕೆಯ ಬಗ್ಗೆ ಹೇಳುವುದಾದರೆ ವಿಷಯಗಳು ಅನೇಕ...ಪರರ ಸಂತೋಷಕ್ಕೆ ಕಾರಣರಾಗಿ,ನೆರೆಹೊರೆಯವರ ಕಷ್ಟಗಳಿಗೆ ಕಣ್ಣೀರಿಟ್ಟು ಸಹಕರಿಸಿ, ಪರರಿಗೆ ಸಹಾಯ ಮಾಡುವುದರಲ್ಲೇ ತನ್ನ ಜೀವನದ ಅತಿ ಹೆಚ್ಹಿನ ಕ್ಷಣಗಳನ್ನು ಕಳೆಯುತ್ತಿದ್ದ ಆ ಜೀವಕ್ಕೆ ನನ್ನ ಮೇಲಿನ ಪ್ರೀತಿ , ಮಮತೆ ಅಪಾರ. ಮುಂದಿನ ಜೀವನದ ಬಗ್ಗೆ ಅದೆಷ್ಟೋ ಕನಸುಗಳನ್ನು ಹೊಂದಿದ್ದ ನನ್ನ ಪ್ರೀತಿಯ ಆ ಜೀವ ತನ್ನ ಕನಸುಗಳ ಜೊತೆಯಲ್ಲೇ ಮರೆಯಾದ  ಆ ಸಂದರ್ಭ(14/08/2010) ನನ್ನ ಜೀವನದ ಮರೆಯಲಾಗದ ಬಹು ದೊಡ್ಡ ಕಹಿಘಟನೆ...
 ನನ್ನ ಜೀವನದ ಯಾವುದೇ ಸಂತೋಷದ ಸಂದರ್ಭದಲ್ಲಿ ನನಗಿಂತ ಮೊದಲು ಅತೀ ಹೆಚ್ಚು ಸಂತಸ ಪಡುತ್ತಿದ್ದ ನನ್ನ ಜೀವವೇ ಇಲ್ಲದ ಈ ನನ್ನ ಜೀವನ ನೀರಿಲ್ಲದ ಬರಡು ಭೂಮಿಯಂತೆ, ಜೀವನದಲ್ಲಿ ಕೆಲವು ದುಃಖದ ಸಂದರ್ಬದಲ್ಲಿ ಖುಷಿಯಿಂದ ಇರುವಂತೆ ನಟಿಸುವುದಕ್ಕಿಂತ,ನಮ್ಮ ಸಂತಸದ ಸಂಧರ್ಬ ಗಳನ್ನು ನಮ್ಮ ನೆಚ್ಚಿನವರೊಂದಿಗೆ ಹಂಚಿಕೊಳ್ಳಲಾಗದೇ ಇರುವಂತ ಸಂಧರ್ಬ ಅತ್ಯಂತ ಕಷ್ಟಕರ . ಇಂತಹ ಒಬ್ಬ ಆದ್ಭುತ ವ್ಯಕ್ತಿಯನ್ನು ನನ್ನ ಈ ಪುಟ್ಟ ಜೀವನದಿಂದ ಇಷ್ಟು ಬೇಗ
ಕಳೆದು ಕೊಂಡ ನತದೃಷ್ಟ  ನಾನು. ನನ್ನ ಪ್ರೀತಿಯ ಜೀವದ ನೆನೆಪಿನಲ್ಲೇ , ಅವರ ಮಾರ್ಗದರ್ಶನದಲ್ಲೇ,ಬೇರೆಯವರಿಂದ ಪ್ರತಿಯಾಗಿ ಏನನ್ನೂ ಬಯಸದೇ ಅವರ ಜೀವನ ಶೈಲಿಯಂತೆ ಪರರ ಸಂತೋಷಕ್ಕೆ ಕಾರಣನಾಗುತ್ತ ನನ್ನ ಜೀವನವನ್ನು ಕಳೆಯಬೇಕೆಂಬುದು ನನ್ನ

ಜೀವನದ ಅತೀ ದೊಡ್ಡ ಆಸೆ..........

Tuesday, 1 November 2011

ಮೊದಲ ಮಾತು

"ಮನಸ್ಸಿನ ಮಾತು"  ಕೇವಲ ನನ್ನ ಮನಸ್ಸಿನ ಮಾತಲ್ಲ , ನಾನು ಕೇಳಿದ , ಓದಿದ,ಜೊತೆಗೆ ನನ್ನ ಜೀವನದಲ್ಲಿ ನನ್ನ ಅನುಭವಕ್ಕೆ ಬಂದ  ಕೆಲವೇ ಕೆಲವು ವಿಷಯಗಳ ಹಂಚಿಕೆ .... ನಮ್ಮ ಜೀವನದ ಹಾದಿಯಲ್ಲಿ ಅದೆಷ್ಟೋ ವಿಷಯಗಳನ್ನು ನಾವು ಅನುಭವಿಸುತ್ತಾ , ತಿಳಿದುಕೊಳ್ಳುತ್ತಾ, ಹೋಗುತ್ತೇವೆ....ಅಂತಹ ಅದೆಷ್ಟೋ ವಿಷಯಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳುವದರಲ್ಲಿ ಅದೇನೋ ಉಲ್ಲಾಸ , ಸಂತೋಷ... ನಾವು ಹುಟ್ಟಿದಾಗಿನಿಂದ ಸಾಯುವವರೆಗೆ ನಮ್ಮ ಜೀವನ ಶೈಲಿ ವಿಬಿನ್ನ ಹಂತಗಳಲ್ಲಿ ವಿಭಿನ್ನ ರೀತಿಯಲ್ಲಿ ಬದಲಾಗುತ್ತಾ ಸಾಗುತ್ತದೆ , ಯಾರೂ ಸಹಾ ಒಂದೇ ತರನಾದ ಜೀವನ ಶೈಲಿಯನ್ನು ತುಂಬಾ ವರ್ಷಗಳ ಕಾಲ ಮುಂದುವರೆಸಿಕೊಂಡು ಹೋಗುವುದು ತುಂಬಾ ಕಷ್ಟಕರವಾದ ಸಂಗತಿ..... ನಮ್ಮ ಚಿಂತನೆಗಳು , ನಮ್ಮ ಅನುಭವಗಳು ನಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತಾ ಸಾಗುತ್ತದೆ ........ ಅನೇಕ ವ್ಯಕ್ತಿಗಳು ನಮ್ಮ ಜೀವನದಲ್ಲಿ ಪ್ರವೇಶಿಸುತ್ತಾರೆ, ಅನೇಕರನ್ನು  ನಮ್ಮ ಜೀವನದಿಂದ ಕಳೆದುಕೊಳ್ಳುತ್ತೇವೆ , ಇನ್ನೂ ಅನೇಕರು ಪ್ರಸ್ತುತ ನಮ್ಮ ಜೊತೆಗಿರುವಂತೆ ಕೊನೆಯವರೆಗೂ ಹೀಗೆ ಇರುತ್ತಾರೆ  , ನಮ್ಮ ಸಂಭಂದ ಶಾಶ್ವತ ಅನ್ನುವ ಆತ್ಮ ವಿಶ್ವಾಸದಿಂದ ನಮ್ಮ ಜೀವನ ಸಾಗುತ್ತಿದೆ ........ ಅದೆಷ್ಟೋ ಮರೆಯಲಾಗದ  ದುಃಖದ ವಿಷಯಗಳು , ಸಂತೋಷದ ಸಂಗತಿಗಳ ನಡುವೆ ನಮ್ಮ ಜೀವನದ ಪಯಣ .........  ಹೀಗೆ ನನ್ನ ಜೀವನದ  ಪ್ರತೀ ಹಂತದಲ್ಲೂ ನನ್ನ ಅನುಭವಕ್ಕೆ  ಬಂದ ಅದೆಷ್ಟೋ ಸಂಗತಿಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುವ ಒಂದು ಚಿಕ್ಕ ಪ್ರಯತ್ನ ಈ ನನ್ನ "ಮನಸ್ಸಿನ ಮಾತು"