Sunday 30 September 2012

ಮಧ್ಯಂತರ ... ಹಲವು ಮನಸ್ಸುಗಳ ನಡುವೆ.....




  " ಹಲವು ಗೆಳೆಯರು ಗುಂಪು ಸೇರಿಕೊಂಡು ಯಾವುದೋ ಪ್ರವಾಸದ ಬಗ್ಗೆ ಮಾತನಾಡುತ್ತಿದ್ದಾರೆ , ಆದರೆ  ಅದೇ ಗುಂಪಿನ ಮತ್ತೊಬ್ಬ ಸದಸ್ಯ ಕಾರಣಾಂತರದಿಂದ  ಈ ಚರ್ಚೆ ಯಲ್ಲಿ  ಭಾಗವಹಿಸಿಲ್ಲ . ಆತನಿಗೆ  ಯಾವುದೋ ಕಾರಣವಿರಬಹುದು ಅದು ಇಲ್ಲಿ ಮುಖ್ಯವಲ್ಲ . ಅವನು ಈ ಚರ್ಚೆಯಲ್ಲಿ ಭಾಗವಹಿಸಲಿಲ್ಲ  ಎನ್ನುವುದಷ್ಟೇ ಮುಖ್ಯ . ಅವನ  ಅನುಪಸ್ಥಿತಿಯಲ್ಲೇ  ಚರ್ಚೆ ನಡೆಯಬಹುದು  ಹಾಗೂ ಸಾಮೂಹಿಕ ತೀರ್ಮಾನ  ತಗೆದುಕೊಳ್ಳಬಹುದು.  ಆದರೆ  ಇಲ್ಲಿ  ತೀರ್ಮಾನಗಳು ತೆಗೆದುಕೊಂಡ  ನಂತರ  ಆ  ಅನುಪಸ್ಥಿತಿಯ ಗೆಳೆಯನ ಬಗೆಗೆ  ಹತ್ತು ಹಲವು ಚರ್ಚೆಗಳೂ ಸಹ ನಡೆಯುತ್ತದೆ . ಅವನ  ಒಳ್ಳೆಯ ಕೆಲಸಗಳಿಗಿಂತ ಹೆಚ್ಚಾಗಿ  ಅವನು  ಮಾಡಿದ , ಮಾಡುತ್ತಿರುವ  ಅನೇಕ  ತಪ್ಪುಗಳು  ಅಂದಿನ  ಚರ್ಚೆಯಲ್ಲಿ  ತಮ್ಮ ಅಸ್ತಿತ್ವ ಪಡೆದು ಕೊಳ್ಳುತ್ತವೆ... "
                      ಹೀಗೆ ನಾನು ಇಲ್ಲಿ ಹೇಳಲು ಹೊರಟಿರುವ  ವಿಷಯ ಇಂತಹ  ಹಲವು  ಸಮಯ  ಸಂದರ್ಭ ಗಳಿಗೆ  ಹೋಲಿಕೆಯಾಗುವಂತಹ ನಮ್ಮ ಸುತ್ತ ಮುತ್ತ  , ನಮ್ಮ  ಸನಿಹದಲ್ಲಿ  ನಮ್ಮ ನಮ್ಮಲ್ಲಿಯೇ  ನಡೆಯುತ್ತಿರಬಹುದಾದಂತಹದು . ಇಂತಹ ವಿಷಯಗಳು  ಹಲವು ಜನರ  ಅನುಭವಗಳಲ್ಲಿ  ಮನೆ ಮಾಡಿರುವುದು  ಅಷ್ಟೇ ಸತ್ಯ . ಪರರ  ಚಿಂತನೆ ನಮಗೆಕಯ್ಯಾ , ನಮ್ಮ ನಮ್ಮ ಚಿಂತನೆಗಳು ನಮಗೆ ಸಾಕಲ್ಲವೇ ..??  ಎನ್ನುವುದಕ್ಕಿಂತ  " ನಮ್ಮ ಚಿಂತೆಗಳು ನಮಗೇಕೆ  ಪರರ  ಚಿಂತನೆ ಯಷ್ಟೇ  ನಮಗೆ  ಮುಖ್ಯ ವಲ್ಲವೇ ..??  "   ಎನ್ನುವಂತಾಗಿದೆ .  ಇಲ್ಲಿ ತಮ್ಮ ತಮ್ಮ  ತಪ್ಪುಗಳನ್ನು ಬದಿಗಿಡುವ  ಆತುರದಲ್ಲಿ  ಪರರ  ತಪ್ಪುಗಳನ್ನೂ , ಅವರ  ಗುಣ ನಡತೆಯನ್ನು  ಎತ್ತಿ ಹಿಡಿಯುವುದು ಸರ್ವೆ ಸಾಮಾನ್ಯ. ಬೇರೆಯವರ ಬಗೆಗೆ  ಮಾತನಾಡುವುದರಲ್ಲಿ ಎರಡು ಬಗೆಗಳಿವೆ . ಒಂದು ವ್ಯಕ್ತಿಯ ಬಗ್ಗೆ  ಅವನ ಅನುಪಸ್ಥಿತಿಯಲ್ಲಿ  ಒಳ್ಳೆಯ ಮಾತುಗಳನ್ನಾಡುವುದು .ಅವನ  ಕೆಲಸಗಳನ್ನು ಗೌರವಿಸುವುದು  ಇತ್ಯಾದಿ. ಮತ್ತೊಂದು ಬಗೆ ಇದೆ ,ಈ ಮೇಲೆ ಹೇಳಿದಂತೆ  ಅನುಪಸ್ಥಿತಿಯಲ್ಲಿರುವ  ವ್ಯಕ್ತಿಯ ಬಗೆಗೆ ಬೇಡದಮಾತುಗಳನ್ನಾಡುವುದು. ಯಾವತ್ತೋ , ಎಷ್ಟೋ ದಿನಗಳ ಹಿಂದೆ  ಅವನ ಗುಣ ನಡತೆಯಿಂದ  ನಮಗಾದ  ತೊಂದರೆಯನ್ನು ಪ್ರಮುಖ ಕಾರಣವಾಗಿಟ್ಟುಕೊಂಡು  ದುರುದ್ದೇಶದಿಂದ  ಅವನ  ವ್ಯಕ್ತಿತ್ವವನ್ನೇ   ಸಣ್ಣದಾಗಿಸಿ, ಅವನ  ಸಣ್ಣ ಸಣ್ಣ ತಪ್ಪುಗಳನ್ನು ಎತ್ತಿಹಿಡಿಯುವುದರ  ಜೊತೆಗೆ  ಅವನದಲ್ಲದ  ಆರೋಪಗಳನ್ನು ಅವನ ಮೇಲೆ  ಹೊರಿಸುವುದು  ಇತ್ಯಾದಿ..ಹೀಗೆ  ನನ್ನ ಅನುಭವದಲ್ಲಿಯೂ ಇಂತಹ  ಹಲವು ಘಟನೆಗಳು ನಡೆದಿವೆ. ನಾನೂ ಸಹ  ನನ್ನ ಗೆಳೆಯರೊಂದಿಗೆ ಸೇರಿಕೊಂಡು ನಮ್ಮ ಮತ್ತಾವುದೋ  ಗೆಳೆಯನ ಬಗೆಗೆ ಇಂತಹ  ಬೇಡದ  ಹತ್ತು ಹಲವು ಮಾತುಗಳನ್ನಾದಿದ್ದೇವೆ . ಆಗ  ನನ್ನ ಅನುಭವಕ್ಕೆ ಬಂದ  ಒಂದು ವಿಷಯ ವೆಂದರೆ  ನಮ್ಮ ಸುತ್ತ ಮುತ್ತಲೂ  ನಡೆಯುತ್ತಿರುವ   ಇಂತಹ ಸಾಮಾನ್ಯ ಜೀವನ, ಗುಂಪು  ಗೆಳೆತನ  , ಪ್ರೀತಿ ಸ್ನೇಹ  ಸಂಬಂಧಗಳ   ಆಂತರಿಕ  ಸತ್ಯ.
                        ನಮ್ಮದೂ  ಒಂದು  ಗೆಳೆಯರ  ಗುಂಪಿದೆ . ನನ್ನ  ಗೆಳೆಯರ ಗುಂಪಿನೊಂದಿಗೆ  ಕಾಲ ಕಳೆಯುವುದೆಂದರೆ  ಅದೊಂದು ರೀತಿಯ ಸ್ವರ್ಗ .  ನಮ್ಮ  ಈ  ಪುಟ್ಟ ಸಮೂಹದಲ್ಲಿ  ನಡೆದ  ಕೆಲವು  ಘಟನೆಗಳು , ಅನುಭವಗಳೇ  ಈ  ಪುಟ್ಟ ಬರಹಕ್ಕೆ ಕಾರಣ.  ಕೆಲವು ದಿನಗಳ ಹಿಂದೆ  ನಮ್ಮ ಗೆಳೆಯನೊಬ್ಬನ  ಸಣ್ಣ  ತಪ್ಪು ಉಳಿದ ಎಲ್ಲ ಗೆಳೆಯರ  ಬೇಸರಕ್ಕೆ  ಕಾರಣವಾಗಿತ್ತು.  ಅವನ ತಪ್ಪು ಪ್ರತಿಯೊಬ್ಬರಿಗೂ ತಿಳಿದಿತ್ತು . ನನಗೂ ಕೂಡ.  ಆದರೆ  ಯಾರೊಬ್ಬರೂ ಸಹ  ಅವನ ಬಳಿ  ನೇರವಾಗಿ  ಮಾತನಾಡಲಿಲ್ಲ . ಅವನಿಗೆ ಅವನ  ತಪ್ಪಿನ  ಅರಿವನ್ನು ಮಾಡಿಕೊಡಲಿಲ್ಲ. ಅವನು  ಇಲ್ಲದ  ಸಂದರ್ಭ ದಲ್ಲಿ  ಉಳಿದ ನಾವೆಲ್ಲ ಸ್ನೇಹಿತರು  ಒಂದೆಡೆ  ಸೇರಿದಾಗ  ಈ  ವಿಷಯದ ಬಗ್ಗೆ  ಮಾತನಾಡಲು  ಪ್ರಾರಂಬಿಸಿ  ಹೀಗೆ  ಅವನ ಹತ್ತು ಹಲವು  ತಪ್ಪುಗಳು , ಎಷ್ಟೋ ಹಳೆಯ ವಿಷಯಗಳು  ಚರ್ಚೆಗೆ ಗ್ರಾಸವಾದವು.  ನಾನೂ ಸಹ ಅವನ  ಕೆಲವು ತಪ್ಪುಗಳನ್ನು  ಎತ್ತಿಹಿಡಿದಿದ್ದೆ. ಅವನ  ತುಂಬಾ ಆಪ್ತ ಗೆಳೆಯರೆನಿಸಿಕೊಂಡವರೂ  ಸಹ  ಅವನ ಬಗೆಗೆ  ಮಾತನಾಡುತ್ತಿದ್ದದನ್ನು ನೆನೆಸಿಕೊಂಡಾಗ  ನನ್ನ  ಪುಟ್ಟ ಮನಸ್ಸಿನಲ್ಲಿ ಮೂಡಿದ  ಪ್ರಶ್ನೆ  - " ನಾನೂ ಸಹ  ಈ ಎಲ್ಲ  ಗೆಳೆಯರಿಂದ  ಎಷ್ಟು ಭಾರಿ  ಇದೇ ರೀತಿ ಚರ್ಚೆಗೆ ಕೇಂದ್ರ ಬಿಂದುವಾಗಿರಬಹುದು . ನಮ್ಮ ನಡುವೆ ಎಷ್ಟೊಂದು ಹೊಂದಾಣಿಕೆ  , ಪರಸ್ಪರ ಸಹಾಯ ಮನೋಭಾವ , ಸ್ನೇಹ  ಪ್ರೀತಿ  ಇದ್ದರೂ  ಸಹ  ಇದು  ಕೇವಲ ಮೇಲುನೋಟಕ್ಕಷ್ಟೇ  ಸೀಮಿತ ವಾಗಿದೆಯಾ ...??? "
  ನಾವು  ಪರರ ಬಗೆಗೆ ಹೇಗೆ  ಮಾತನಾಡುತ್ತೀವೋ ಹಾಗೆ ಬೇರೆಯವರೂ  ಸಹ ನಮ್ಮ ಬಗೆಗೆ  ಮಾತನಾಡುತ್ತಿರುತ್ತಾರೆ  ಎನ್ನುವ  ಎಚ್ಚರಿಕೆಯ  ಘಂಟೆಯ  ಸದ್ದು  ನಮಗೆ  ಆಗಾಗ  ಕೇಳಿಸುತ್ತಿರಬೇಕು . ಬೇರೆಯವರ ಬಗೆಗೆ ಕೇವಲವಾಗಿ ಮಾತನಾಡುವುದು , ಅವರು ಹಾಗೆ  ಇವರು ಹೀಗೆ  ಅವನು ಸರಿ ಇಲ್ಲ  ಅವಳ ಬುದ್ದಿ  ಕೆಟ್ಟದು  ಹೀಗೆ  ಎಂದು ಯಾರಾದರೂ ನಿಮ್ಮ ಬಳಿ  ಮಾತನಾಡುತ್ತಿದ್ದರೆ , ದೂರುತ್ತಿದ್ದರೆ  ನೀವು  ಅವರ  ಮಾತುಗಳನ್ನು  ಹೇಗೆ  ನಂಬುತ್ತೀರಿ ..???  ನಿಮ್ಮ ಬಗ್ಗೆಯೂ  ಸಹ  ಅದೇ ವ್ಯಕ್ತಿ  ಅವರ ಬಳಿ ಹೀಗೆ ಮಾತನಾಡಬಹುದಲ್ಲವೇ....???    ನಮ್ಮ  ಬಳಿ  ಯಾರಾದರೂ ಮೂರನೆಯ ವ್ಯಕ್ತಿಯ ಬಗೆಗೆ  ಒಳ್ಳೆಯ ಮಾತುಗಳನ್ನಾಡಿದರೆ  ಅದನ್ನು ಪ್ರೀತಿಯಿಂದ  ಸ್ವಾಗತಿಸೋಣ.  ಅದೇ  ಪರ  ವ್ಯಕ್ತಿಯ ಬಗೆಗೆ  ಇಲ್ಲ ಸಲ್ಲದ  ಮಾತುಗಳು, ಅವನ  ತಪ್ಪುಗಳು , ಗುಣ ನಡತೆ ,ಆಚಾರ ವಿಚಾರ ಗಳ  ಆರೋಪ  ಮಾಡುವುದನ್ನು  ಖಂಡಿಸುವುದು  ಉತ್ತಮ . ಒಬ್ಬ ವ್ಯಕ್ತಿಯ  ಅನುಪಸ್ಥಿತಿಯಲ್ಲಿ  ಅವನ  ತಪ್ಪುಗಳ , ನಡತೆಯ ಬಗ್ಗೆ  ಮಾತನಾಡುವುದಕ್ಕಿಂತ , ಆಪಾದನೆ  ಮಾಡುವುದಕ್ಕಿಂತ  ಅವನ ಉಪಸ್ಥಿತಿಯಲ್ಲೇ  ಮನಸ್ಸಿಗೆ  ನಾಟುವಂತಹ  , ಅವನಿಗೆ ಇಷ್ಟ  ಆಗುವ  ರೀತಿಯಲ್ಲಿ  ಮಾತನಾಡಿ  ತಪ್ಪುಗಳನ್ನು ತಿದ್ದುವುದು  ಉಪಯುಕ್ತ ವಾದದ್ದು  ಎನ್ನುವುದು ನನ್ನ ಅಭಿಪ್ರಾಯ.
                                 ನಮ್ಮಂತೆಯೇ  ಎಲ್ಲರು , ನಾವೆಲ್ಲರೂ ಒಂದೇ  ಎಂಬ ಭಾವನೆಯೊಂದಿಗೆ , ಬೇರೆಯವರ  ಬಗೆಗೆ  ಅವಹೇಳನಕಾರಿ  ಮಾತುಗಳನ್ನಾಡದೇ , ಕೇವಲ  ತಪ್ಪುಗಳನ್ನು  ಹುಡುಕುವುದಷ್ಟೇ  ನಮ್ಮ  ವೃತ್ತಿ ಯಾಗಿರಿಸಿಕೊಳ್ಳದೆ ,  ನಡೆದು ಹೋದ ಹಾಗೂ ನಡೆಯುತ್ತಿರುವ  ತಪ್ಪುಗಳಿಗೆ  ತಕ್ಕ  ಪರಿಹಾರಗಳನ್ನು  ಕಂಡುಕೊಳ್ಳುತ್ತಾ , ನಮ್ಮಿಂದ  ಯಾರಿಗೂ  ನೋವಾಗದಂತೆ  ನಮ್ಮ  ಕೈಲಾಗುವಷ್ಟು  ಒಳ್ಳೆಯ ಕೆಲಸಗಳನ್ನೂ  ಮಾಡುತ್ತಾ   ಈ ಬದುಕು  ಎನ್ನುವ  ಜಟಕಾ ಬಂಡಿಯನ್ನು ನಡೆಸುತ್ತಿದ್ದರೆ  ಎಷ್ಟು  ಹಿತ ಎನಿಸುವುದಿಲ್ಲವೇ .....???