Tuesday 24 April 2012

ಆತ್ಮೀಯ ಗೆಳೆತನದ ನಿರೀಕ್ಷೆಯಲ್ಲಿ ..............


ತುಂಬಾ ಬೋರ್  ಅದಾಗ ಏನಾದರು ಬರೀಬೇಕು ಅನ್ಸುತ್ತೆ , ಏನೇನೋ  ವಿಷಯಗಳು ನೆನಪಿಗೆ ಬರುತ್ತೆ . ಹೀಗೆ  ಮನದಲ್ಲಿ ಮೂಡಿದ  ಭಾವನೆಗಳ ಬೆನ್ನು ಹಿಡಿದು ಹೊರಟರೆ ಒಂದರ ಹಿಂದೆ ಒಂದರಂತೆ ಅದರ ಕೊಂಡಿ ಬೆಳೆದು ದೊಡ್ಡ ಸರಪಳಿಯೇ ಆಗುತ್ತದೆ . ಆದರೆ  ಈ  ಆಲಸ್ಯ ಇದಿಯಲ್ಲ !!! ಇದು  ಈ ಸರಪಳಿಯನ್ನು ಬೆಳೆಯೋದಕ್ಕೇ ಬಿಡ್ತಾ ಇಲ್ಲ ... ತುಂಬಾ ಸಲ ಸುಮ್ನೆ ಕೂತ್ಕೊಂಡಾಗೆಲ್ಲ  ಮನಸಲ್ಲಿ ತುಂಬಾ ಚಿಂತನೆಗಳು ಮೂಡುತ್ತೆ  ಆದರೆ  ಅದನ್ನು ಒಂದು ಕಡೆ ದಾಖಲಿಸೋಣ ಅಂದ್ರೆ ಈ ದರಿದ್ರ ಸೋಮಾರಿತನ ಇದಿಯಲ್ಲ  ಇದು ನನ್ನ ಲೇಖನಿಗೆ ಅವಕಾಶನೇ ಕೊಡ್ತಾ ಇಲ್ಲ . ಆದ್ರೂ ಇವತ್ತು ತುಂಬಾ ಕಷ್ಟ ಪಟ್ಟು ನನ್ನ ಲೇಖನಿನ  ಹೊರಗೆ ತೆಗೆದು ಪೇಪರ್  ಮೇಲೆ ಇಟ್ಟಿದೀನಿ .ನೋಡೋಣ ಎಲ್ಲಿವರೆಗೆ ಇದು ಆಲಸ್ಯದ ಜೊತೆಗೆ ಹೋರಾಡುತ್ತೆ  ಅಂತ ..!!!!!
   ನನಗೆ  ಈ ಪ್ರೀತಿ , ಸ್ನೇಹ  ಇಂತಹ  ವಿಷಯಗಳಲ್ಲಿ  ತುಂಬಾ ಆಸಕ್ತಿ . ಈ ವಿಷಯಗಳ  ಕುರಿತು ಸ್ನೇಹಿತರೊಂದಿಗೆ   ಮಾತಾಡ್ತಾ ಇರ್ತೀನಿ , ಇದಕ್ಕೆ ಸಂಭಂದಿಸಿದಂತೆ ಲೇಖನಗಳು , ಕಾದಂಬರಿಗಳು  ಹಾಗೂ ಚಲನಚಿತ್ರಗಳನ್ನು ಆಗಾಗ  ನೋಡ್ತಾ ಇರ್ತೀನಿ . ತುಂಬಾನೆ  ಖುಷಿ ಕೊಡುತ್ತೆ . ಆದರೂ ನನಗೆ  ಆಧುನಿಕ  ಪ್ರೇಮದಂತೆ , ಆಧುನಿಕ  ಸ್ನೇಹದ ಮೇಲೆ ಕೂಡ ಅಸಹ್ಯ ಅನ್ನೋ ಭಾವನೆ ಮೂಡ್ತಾ ಇದೆ . ಯಾವಾಗ ಬೇಕಾದರೂ ಹುಟ್ಟಿಕೊಳ್ಳುತ್ತೆ  ಹಾಗೆ ಯಾವಾಗ  ಬೇಕಾದರೂ  ಸಾಯುತ್ತಿದೆ ....
ಕೆಲವೊಂದು ಕಡೆಗಳಲ್ಲಿ ಪ್ರೀತಿ ಹೇಗೆ ತನ್ನ ಘನತೆ - ಗೌರವವನ್ನು ಕಳೆದು ಕೊಳ್ತಾ ಇದಿಯೋ  ಹಾಗೆ ಸ್ನೇಹವೆಂಬ ಪವಿತ್ರ (???) ಸಂಬಂಧವೂ ಸಹ ಹಲವು ಕಡೆಗಳಲ್ಲಿ ತನ್ನ ಪ್ರಭುದ್ದತೆ ಯನ್ನು ವಿನಾಶದ ಅಂಚಿಗೆ ತಳ್ಳುತ್ತಿದೆ . ನಾನು  ಹೀಗೆ  ಸ್ನೇಹದ  ಕುರಿತಾಗಿ ಮಾತನಾಡುತ್ತಿರುವುದಕ್ಕೆ ಹಲವು ಕಾರಣಗಳಿವೆ . ಹತ್ತಿರದಿಂದ  ನಾನು ಕಂಡ ಅನೇಕ  ಸಂಗತಿಗಳು ,ನನ್ನ ಅನುಭವಕ್ಕೆ ಬಂದ  ಕೆಲವೊಂದು ವಿಷಯಗಳು  ಹೀಗೆ  ಅನೇಕ . ನನ್ನ ಮನಸ್ಸೆಂಬ ಪುಟ್ಟ ಮನೆಯ ಬಾಗಿಲನ್ನು ತಟ್ಟಿ ತಟ್ಟಿ ಎಬ್ಭಿಸಿದ  ಹಲವು ಸಂಗತಿಗಳು ,ನೈಜ ಘಟನೆಗಳೇ ಇದಕ್ಕೆ ಮೂಲ ಕಾರಣ.....
  ನಾವು ದೊಡ್ದವರಾಗ್ತಾ ಹೋದಹಾಗೆ ನಮ್ಮ ಭಾವನೆಗಳು ,ಜೀವನಶೈಲಿ ,ಚಿಂತನೆ  ಹೀಗೆ  ಎಲ್ಲವೂ ಬದಲಾಗುತ್ತಾ ಸಾಗುತ್ತದೆ . ನಮ್ಮ ಮನದಲ್ಲಿನ  ಅನೇಕ ಭಾವನೆಗಳನ್ನು ಹಂಚಿಕೊಳ್ಳಲು ಅನುಕೂಲವಾಗುವಂತಹ  ಒಂದು ಆತ್ಮೀಯವಾದ  ಹೃದಯಕ್ಕಾಗಿ ನಮ್ಮ ಮನಸ್ಸು ಪರಿತಪಿಸುತ್ತಿರುತ್ತದೆ . ನನಗೂ ಒಬ್ಬ ಆತ್ಮೀಯ ಗೆಳೆಯ / ಗೆಳತಿ  ಬೇಕು ಅಂತ ಪ್ರತಿಯೊಂದು ಮನಸ್ಸಿಗೂ ಅನ್ನಿಸಿರುತ್ತದೆ . ಹೀಗೆ  ಆತ್ಮೀಯತೆಯ ಹುಡುಕಾಟದ  ಹಾದಿಯಲ್ಲಿ ನಮ್ಮ ಸನಿಹಕ್ಕೆ ಬಂದು , ನಮ್ಮ ಭಾವನೆಗಳಿಗೆ  ಸ್ಪಂಧಿಸುವಂತಹ  ಮನಸ್ಸಿನೊಂದಿಗೆ ನಮ್ಮ ಅಮೂಲ್ಯವಾದ  ಸ್ನೇಹ  ಆರಂಭಗೊಳ್ಳುತ್ತದೆ . ನಮಗೆ  ಎಲ್ಲರೂ ಗೆಳೆಯ / ಗೆಳತಿಯರಾಗಬಹುದು ಆದರೆ   ಎಲ್ಲರನ್ನೂ ಆತ್ಮೀಯರು ( best friend) ಅನ್ನೋದಕ್ಕೆ  ಸಾಧ್ಯನೇ ಇಲ್ಲ ...



 ಈ  ಆತ್ಮೀಯತೆ  ಅನ್ನೋದು ಹೇಗೆ  ಹುಟ್ಟಿಕೊಳ್ಳುತ್ತದೆಯೋ ಗೊತ್ತಿಲ್ಲ , ಆದರೆ  ಬೇರೆ ಬೇರೆ ಮನಸ್ಥಿತಿಯನ್ನೂ ಅರ್ಥೈಸಿಕೊಳ್ಳುವುದು ,ಭಾವನೆಗಳಿಗೆ  ಪರಸ್ಪರ  ಸ್ಪಂಧಿಸುವ ಪರಿ, ಸುಖ ಕಷ್ಟ ,ದುಃಖ  ಧುಮ್ಮಾನ ಗಳನ್ನು  ಹಂಚಿಕೊಳ್ಳುವ , ಪರಸ್ಪರ ಸಮಾಧಾನ ಪಡಿಸಿಕೊಳ್ಳುವಂತಹ  ಸಂಧರ್ಭಗಳು  ಹೀಗೆ  ಇವೆ ಮೊದಲಾದ  ಸಂಗತಿಗಳು ಆತ್ಮೀಯತೆಗೆ  ತಳಹದಿಯಾಗುತ್ತದೆ . ಆತ್ಮೀಯ ಗೆಳೆತನ  ಹೀಗೆ  ಹಂತ ಹಂತವಾಗಿ  ಮುಂದುವರಿಯುತ್ತಾ ಹೋಗುತ್ತದೆ . ಅನೇಕ  ಸಂಧರ್ಭ ಗಳಲ್ಲಿ  ಕೆಲವು  ಸಣ್ಣ ಪುಟ್ಟ ಮುನಿಸುಗಳೂ ಸಹ  ಬರಬಹುದು ಆದರೆ  ಸ್ನೇಹವೆಂಬ ಪವಿತ್ರವಾದ  ಶಕ್ತಿಯ ಮುಂದೆ  ಆ ಅನುಮಾನ ,ಮುನಿಸುಗಳು  ಹೆಚ್ಚು ದಿನ  ಬದುಕಿ ಉಳಿಯಲಾರವು ( ನಿಮ್ಮ ಸ್ನೇಹ  ಪವಿತ್ರವಾಗಿದ್ದು ಅಷ್ಟು ಆಳವಾಗಿದ್ದರೆ  ಮಾತ್ರ ).
 ಆದರೆ  ಪ್ರಸ್ತುತ  ದಿನಗಳಲ್ಲಿ  ಅದೇಕೋ ಗೊತ್ತಿಲ್ಲ ಹಲವು ಕಾರಣಗಳಿಂದ  ಅನೇಕ  ಸ್ನೇಹ  ಸಂಭಂದಗಳು ಆಗಾಗ್ಗೆ  ಮುರಿದುಬೀಳುತ್ತಿರುತ್ತವೆ . ಸ್ನೇಹ ಅನ್ನೋದು ಕೇವಲ ಕಥೆ ಕವನ ಗಳಲ್ಲಿ, ಚಲನಚಿತ್ರಗಳಲ್ಲಿ  ನೋಡುವುದಕ್ಕಷ್ಟೇ ಸೀಮಿತ  ಹೊರತು  ದೈನಂದಿನ  ಜೇವನದಲ್ಲಿ  ಅದರ  ಮಹತ್ವ  ನಮ್ಮ ಅನುಭವಕ್ಕೆ  ಅಷ್ಟೇ  ನಿಜ  ಎಂಬಂತೆ  ಬರುವುದೇ ಇಲ್ಲ . ಸ್ನೇಹ  ಸಂಭಂದಗಳು  ಏರ್ಪಡುವುದಕ್ಕೆ ಬೇಕಾಗುವಷ್ಟು ಆಸಕ್ತಿ ,ಹೊಂದಾಣಿಕೆಯ ಮನೋಭಾವ ,ತಾಳ್ಮೆ,ಅನುಮಾನಗಳನ್ನು ಮೆಟ್ಟಿ ನಿಲ್ಲುವಂತಹ ಶಕ್ತಿ  ನಮ್ಮ ಜೊತೆಯಲ್ಲಿ ಸದಾ ಇರಬೇಕು . ಹೀಗೆ  ಇದ್ದಾಗ  ಮಾತ್ರ ನಮ್ಮ ಸ್ನೇಹ  ಚಿರವಾಗಿರಲು  ಸಾಧ್ಯ. ಇಬ್ಬರೂ ಪರಸ್ಪರ  ಹೊಂದಿಕೊಂಡು ಎಲ್ಲಾ ವಿಷಯಗಳನ್ನು ಸಮನಾಗಿ ಹಂಚಿಕೊಳ್ಳಬೇಕು . ಪರಸ್ಪರ  ನಿರ್ಲಕ್ಷ್ಯ , ತೆಗಳಿಕೆ ,ಅನುಮಾನ  ಅನ್ನೋದು ಬರಬಾರದು .ಇಬ್ಬರಲ್ಲಿ  ಒಬ್ಬರು ದೂರವಾಗುತ್ತಿದ್ದರೆ  ಎಂದರೆ  ಇನ್ನೊಬ್ಬರು ಆದಷ್ಟು ಅವರನ್ನು ಕಾಪಾಡಿಕೊಳೋದಕ್ಕೆ ಪ್ರಯತ್ನ ಪಡಬೇಕು ಯಾಕಂದ್ರೆ ನಿಮ್ಮ ಸ್ನೇಹ ಸುಮ್ಮನೆ ಏರ್ಪಟ್ಟಿಲ್ಲ  ಅನ್ನೋದು ನೆನಪಿರಲಿ . ಅದರ ಹಿಂದೆ  ಹಲವು ಕಾರಣಗಳಿವೆ, ಹಲವು ಏಳು ಬೀಳು ಗಳೂ ಬಂದಿರುತ್ತವೆ. ನಿಮ್ಮ ಸ್ನೇಹ  ಅಷ್ಟು ಆಳವಾಗಿದ್ದೂ  ಪವಿತ್ರವಾಗಿದ್ದರೆ ಮಾತ್ರ ನಿಮಗೆ  ಅದನ್ನು ಏಕೆ  ಅಳಿಯದಂತೆ  ಉಳಿಸಿಕೊಳ್ಳಬೇಕು ಎಂಬುದರ ಮಹತ್ವ ನಿಮ್ಮ ಅರಿವಿಗೆ ಬಂದಿರುತ್ತದೆ . ಆದರೆ ನನ್ನ ಅನುಭವದ  ಪ್ರಕಾರ  ಸ್ನೇಹ ಪವಿತ್ರವಾಗಿದ್ದರೆ ( ನಿಜವಾದ ಆತ್ಮೀಯತೆ ಯಾಗಿದ್ದರೆ  )  ಪರಸ್ಪರ  ಅನುಮಾನ , ತೆಗಳಿಕೆ , ನಿರ್ಲಕ್ಷ್ಯ ಅನ್ನುವಂತಹ  ಪ್ರಶ್ನೆಯೇ ಬರುವುದಿಲ್ಲ...

 ಇಬ್ಬರ  ಚಿಂತನೆಗಳು , ವ್ಯಕ್ತಿತ್ವ ,ನಡೆ ನುಡಿಗಳಲ್ಲಿ ಹಲವು ವ್ಯತ್ಯಾಸಗಳಿರುತ್ತವೆ  ಆದರೂ ಸಹ  ಆತ್ಮೀಯತೆಯ ಪ್ರಶ್ನೆ ಬಂದಾಗ  ಇಬ್ಬರೂ ಒಂದೇ ಎಂಬ ಚಿತ್ರಣ ಕಾಣುತ್ತದೆ . ಗೆಳೆತನಕ್ಕೆ ಯಾವುದೇ ನಿಯಮವಿರುವುದಿಲ್ಲ , ಭೇಧ ಭಾವ ವಿರುವುದಿಲ್ಲ . ಹೆಣ್ಣು ಗಂಡು ,ವಯಸ್ಸು , ಅವರ ನಡುವಿನ ಅಂತರ  ಹೀಗೆ  ಈ ಮೇಲಿನಂತೆ  ಯಾವುದೇ  ವಿಷಯಗಳು ಅಡ್ಡ ಬರುವುದಿಲ್ಲ .
 ಆದರೆ  ಗಂಡು ಹೆಣ್ಣಿನ ವಿಷಯ ಬಂದಾಗ ಮಾತ್ರ  ಅವರ  ಸ್ನೇಹ  ಎಷ್ಟು ಅಮೂಲ್ಯವಾಗಿದ್ದರೂ , ಎಷ್ಟೇ ಪ್ರಾಮಾಣಿಕವಾಗಿದ್ದರೂ ಸಹ  ಅವರನ್ನು ನೋಡುವವರ  ಧೃಷ್ಟಿ  ಮಾತ್ರ ಬೇರೆಯೇ ಆಗಿರುತ್ತದೆ . ಅವರದು ಪವಿತ್ರವಾದ  ಸ್ನೇಹವಾಗಿದ್ದರೂ ಕೂಡ ನೋಡುವ  ಜನರ  ಧೃಷ್ಟಿಯಲ್ಲಿ  ಅವರು ಪ್ರೇಮಿಗಳಂತೆಯೇ  ಕಾಣುತ್ತಾರೆ , ಅವರ  ನಡುವೆ  ಇಲ್ಲ ಸಲ್ಲದ  ಸಂಭಂದಗಳನ್ನು ಕಲ್ಪಿಸಿಕೊಂಡು ಮಾತನಾಡುವಂತಹ  ಜನರಿಗೆ  ಕೊರತೆಯೇ ಇರುವುದಿಲ್ಲ ......



 " ಅವರಿಬ್ಬರ ನಡುವಿನ  ಗೆಳೆತನ  ಎಷ್ಟು ಮಧುರವಾಗಿತ್ತೆಂದರೆ , ಆಕೆ  ಯಾವುದೇ ಸಂದರ್ಭದಲ್ಲಿ  ಎಂತಹದೇ ಸಹಾಯ ಕೇಳಿದರೂ ಆತ  ಪ್ರಾಮಾಣಿಕತೆಯಿಂದ  ಚಾಚೂ ತಪ್ಪದೆ  ಅವಳ  ಸಹಾಯಕ್ಕೆ ಮುಂದೆ ಬರಿತ್ತಿದ್ದ . ಅವಳ  ಕಷ್ಟ , ದುಃಖ  ಜೊತೆಗೆ  ಅವಳ  ಸುಖ ಸಂತೋಷಗಳಲ್ಲಿಯೂ ಪಾಲುದಾರನಗಿರುತ್ತಿದ್ದ . ರಸ್ತೆ ಬದಿಯಲ್ಲಿ , ಕಾಲೇಜು ಕ್ಯಾಂಪಸ್ ನಲ್ಲಿ  ಸಿಕ್ಕರೆ  ಜೊತೆಯಲ್ಲೇ ನಿಂತು ಮಾತನಾಡೋದು,ಮೊಬೈಲ್ ಗೆ ರಿಚಾರ್ಜ್  ಮಾಡ್ಸೋದು ,ಎಕ್ಸಾಮ್  ಫೀಸ್  ಕಟ್ಟೋದಕ್ಕೆ ಕೊನೆಯ ದಿನ  ಇದ್ದು ಅವಳಿಗೆ  ಏನಾದರೂ ತೊಂದರೆಯಾಗಿದ್ದಲ್ಲ್ಲಿ ಅದನ್ನು ಆತನೇ ಭರಿಸುವುದು, ಅವರ ನಡುವೆ ಮೊಬೈಲ್  ನಲ್ಲಿ ನಿರಂತರ  ಮೆಸ್ಸೇಜು , ಸಂಭಾಷಣೆ  ಹೀಗೆ ಹಲವು ವಿಷಯಗಳು ಸಣ್ಣ ಮನಸ್ಸಿನ  ಕೆಲವು ಜನರಲ್ಲಿ ಇವರ ಬಗೆಗೆ  ಬೇರೆ ತರನಾದ ಭಾವನೆಗಳು , ಇಲ್ಲದ  ಸಂಭಂದಗಳು ಹುಟ್ಟಲು ಕಾರಣವಾಗುತ್ತದೆ . ಹೀಗೆ  ಅವಳ ಕೆಲವು ಸಣ್ಣ ಮನಸ್ಸಿನ ಗೆಳತಿಯರ  ಇಲ್ಲ ಸಲ್ಲದ ಮಾತುಗಳು, ಅವರೇ ಹುಟ್ಟು ಹಾಕುತ್ತಿದ್ದ  ಇಲ್ಲದ  ಸಂಭಂದಗಳು , ಅನುಮಾನ  ಇದೇ ಹತ್ತು ಹಲವು ಕಾರಣಗಳು ಸೇರಿ  ಆಕೆ  ಆತನ ಅಮೂಲ್ಯವಾದ  ಸ್ನೇಹವನ್ನೇ ದಿಕ್ಕರಿಸಿ , ಪರಸ್ಪರ  ಕಣ್ಣೆದುರಿಗೇ ಓಡಾಡಿಕೊಂಡಿದ್ದರೂ ಸಹ  ಈಗ ಅವನ್ಯಾರೋ  ಅವಳ್ಯಾರೋ ........."
 ಹೀಗೆ  ಪವಿತ್ರವಾದ  ಸ್ನೇಹವೂ ಸಹ ಅನುಮಾನಗಳ  ಹುತ್ತ  ಬೆಳೆದು ಹೇಳ ಹೆಸರಿಲ್ಲದಂತೆ  ಮಾಯವಾಗುತ್ತಿದೆ . ಇಲ್ಲಿ ನಾಶವಾದ  ಸ್ನೇಹ ಸಂಭಂದದಲ್ಲಿ  ಇಬ್ಬರ  ಪಾತ್ರವೂ ಇದೆಯಾ ?? ಅಥವಾ ಆಕೆಯದು ಮಾತ್ರ ತಪ್ಪಾ ??  ಅವನ ತಪ್ಪೇನಾದರೂ ಇದೆಯಾ ??  ಈ ರೀತಿಯ ಹಲವು ಪ್ರಶ್ನೆಗಳು ನಮ್ಮ ಕಣ್ಣೆದುರಿಗೆ  ಕಾಣುತ್ತದೆ . ಈ ಪ್ರಶ್ನೆಗಳಿಗೆ  ನಿಮ್ಮ ಉತ್ತರ ?????
 ಅದೇನೇ ಇರಲಿ ನನ್ನ ಅನುಭವದ ಪ್ರಕಾರ  ಅವನ  ಸ್ನೇಹ  ಪವಿತ್ರವಾದದ್ದು  ಅನ್ನೋದು ಮಾತ್ರ ಅಷ್ಟೇ ಸತ್ಯ ಆದರೆ  ಅವಳ  ಅನುಮಾನವೆಂಬ ಹುಚ್ಚು ರೋಗಕ್ಕೆ ಅಮೂಲ್ಯವಾದ  ಸ್ನೇಹ ಬಲಿಯಾದದ್ದು ಮರೆಯಲಾಗದಂತಹ  ನೋವಿನ ಸಂಗತಿ . ಅದೇನೋ ಗೊತ್ತಿಲ್ಲ ಹಲವು  ವಿಷಯಗಳಲ್ಲಿ  ಹುಡುಗರಿಗಿಂತ  ಹುಡುಗಿಯರನ್ನು ನಂಬೋದೇ  ತುಂಬಾ ಕಷ್ಟ . ಮೊನ್ನೆ ನನ್ನ ಬಾಲ್ಯದ ಗೆಳತಿ ಈ ಮೇಲಿನ ವಿಷಯದ ಬಗ್ಗೆ  ಮಾತನಾಡುತ್ತಾ  ಹೇಳಿದಳು - "  ನಾನು  ಹುಡುಗಿಯಾಗಿ ಹೇಳ್ತಾ ಇದೀನಿ , ಹುಡುಗರು ಹುಡುಗಿಯರ ಜೊತೆ ಗೆಳೆತನ ಇಟ್ಕೋಬಾರದು , ಅವರಿಂದ  ಎಷ್ಟು ಸಹಾಯ ಆಗುತ್ತೋ  ಅಷ್ಟನ್ನು ಬಳಸಿಕೊಂಡು ಮತ್ತೆ  ಬಿಟ್ ಹಾಕ್ತಾರೆ , ಎಲ್ಲರಿಗೂ ಆತ್ಮೀಯ ಗೆಳೆತನದ ಮಹತ್ವ ಗೊತ್ತಿರೋದಿಲ್ಲ ...."  ಹೀಗೆ  ಅವಳು ಹೇಳಿದ  ಪ್ರತಿಯೊಂದು ಮಾತು ನನಗೆ  ತಕ್ಕ ಮಟ್ಟಿಗೆ ಸರಿ ಅನ್ನಿಸಿತು  ಏಕೆಂದರೆ  ನನ್ನ ಅನುಭವದ ಜೊತೆ  ಅವಳ  ಮಾತು ಹೊಂದಿಕೆಯಾಗಿತ್ತು ....
 ನಮ್ಮ ಸ್ನೇಹ ಅತೀ ಆಳವಾಗಿದ್ದು ಅಮುಲ್ಯವಾಗಿದ್ದರೆ , ಪ್ರೇಮಿಗಳ ಪ್ರೀತಿ ಹಟಾತ್ತನೆ  ಮುರಿದು ಬಿದ್ದಾಗ ಅದೆಷ್ಟು ನೋವಾಗುತ್ತದೋ  ಅದಕ್ಕಿಂತ  ಅತೀ ಹೆಚ್ಚು ನೋವು ಈ ಪವಿತ್ರ ಸ್ನೇಹ ಸಂಭಂದ ಮುರಿದುಬಿದ್ದಾಗ  ಅನುಭವಕ್ಕೆ ಬರುತ್ತದೆ . ನಿಮ್ಮ ಸ್ನೇಹ ಪವಿತ್ರವಾಗಿದ್ದು , ನಿಮ್ಮ ತಪ್ಪಿಲ್ಲದೇ, ಮುರಿದು ಬಿದ್ದ ಸ್ನೇಹದ ಮರುಜೀವಕ್ಕಾಗಿ  ನಿಮ್ಮ ಮನಸ್ಸು ಪರಿತಪಿಸುತ್ತಿದ್ದು , ನಿಮ್ಮ ಗೆಳೆಯ / ಗೆಳತಿಯಿಂದ  ಪುನಃ  ಪುನಃ  ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದು , ಸ್ನೇಹದ  ಮರು ಹುಟ್ಟೇ ಕಷ್ಟ ಎನ್ನಿಸಿದರೆ  ದಯವಿಟ್ಟು ನಿಮ್ಮ ಪ್ರಯತ್ನವನ್ನು ಅಲ್ಲಿಗೆ  ಬಿಟ್ಟು ಬಿಡಿ . ಕೊನೆಯ ಬಾರಿ  ನಿಮ್ಮ ಸಂತೋಷಕ್ಕಾಗಿಯಾದರೂ ಮರೆಯಲಾಗದ ಒಂದು ಕಾಣಿಕೆಯನ್ನು  ಅವರಿಗೆ  ತಲುಪಿಸಿ ಅವರ ಜೀವನದಿಂದ  ಹೊರಬಂದುಬಿಡಿ . ಈ  ಕಾಣಿಕೆ ಏಕೆಂದರೆ ಅವರಿಗೆ ಜೀವಕ್ಕೆ ಜೀವ ಕೊಡುವಂತಹ  ಸ್ನೇಹಕ್ಕಿಂತ ಹೆಚ್ಚು ನಿರ್ಜೀವಿಗಳ  ಮೇಲೆಯೇ  ನಂಬಿಕೆ ...!!!!  ನಮಗೆ  ನಮ್ಮಂತಹ  ಪವಿತ್ರವಾದ  ಹೃದಯವಂತರೇ ಗೆಳೆಯರಾಗಿ , ಆತ್ಮೀಯರಾಗಿ  ನಮ್ಮ ಜೀವನದ  ಹಾದಿಯಲ್ಲಿ  ಮತ್ತೆ  ಬರುತ್ತಾರೆ  ಎನ್ನುವ  ಆತ್ಮ ವಿಶ್ವಾಸದೊಂದಿಗೆ  ನಮ್ಮ ಮುಂದಿನ  ಸಂತಸದ  ದಿನಗಳೆಡೆಗೆ  ನಮ್ಮ ಜೀವನದ ಪಯಣ ಸಾಗುತ್ತಿರಬೇಕು ..............................

No comments:

Post a Comment